ದುರಸ್ಥಿ ಭಾಗ್ಯ ಕಾಣದ ಸಿರಿಗೇರಿ ಸಾರ್ವಜನಿಕ ರುದ್ರಭೂಮಿ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜ13. ಗ್ರಾಮದ ನಡವಿ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿ (ಸ್ಮಶಾನ) ಪ್ರದೇಶದಲ್ಲಿ ಬೇಲಿ ಬೆಳೆದು ಬೀಳು ಸ್ವರೂಪವನ್ನು ತಾಳಿದೆ. ಸುಮಾರು 4 ಎಕರೆಗಿಂತ ಮೇಲ್ಪಟ್ಟು ವಿಸ್ತೀರ್ಣ ಹೊಂದಿರುವ ಈ ಸ್ಮಶಾನವನ್ನು ಅಭಿವೃದ್ಧಿಗೊಳಿಸುವ ಕೆಲಸ ಗ್ರಾಮಾಡಳಿತದಿಂದ ನಡೆಯುತ್ತಿಲ್ಲವೆಂಬುದು ಇಲ್ಲಿನ ಕೆಲ ಸಮುದಾಯದವರ ಅಸಮಧಾನಕ್ಕೆ ಕಾರಣವಾಗಿದೆ. ವೀರಶೈವ ಲಿಂಗಾಯತ ಸಮುದಾಯ ಮತ್ತು ಲಿಂಗಾಯತ ಸಮುದಾಯದವರು ಸ್ವಂತ ಖರ್ಚಿನಿಂದ ಬೇರೆ ಬೇರೆ ಪ್ರದೇಶದಲ್ಲಿ ಜಮೀನು ಖರೀದಿಸಿಕೊಂಡು ಸತ್ತಾಗ ದೇಹವು ಮುಕ್ತಿ ಹೊಂದುವ ಜಾಗವೆಂದು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಅದೇ ತೆರನಾಗಿ ಮುಸ್ಲಿಂ ಸಮುದಾಯದವರು ತಮ್ಮ ಸ್ಮಶಾನವನ್ನು ಪಾರ್ಕ್ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಉಳಿದ ಸಮುದಾಯದವರು ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗದವರೇ ಆದ ಕುರುಬರು, ವಾಲ್ಮೀಕಿ, ಛಲವಾದಿ, ಬೋವಿ, ಹರಿಜನ, ನೇಕಾರ, ಉಪ್ಪಾರ, ಇತರ ಸಮುದಾಯದವರು ಹೆಚ್ಚು ಅಂತ್ಯ ಸಂಸ್ಕಾರ ಮಾಡುವ, ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಸ್ಮಶಾನ ಮಾತ್ರ ಅಭಿವೃದ್ಧಿ ಹೊಂದದೇ ಬೇಲಿಬೆಳೆದ ಬೀಳು ಅಥವಾ ಕಾಡಿನಂತಿದೆ.
ಸುತ್ತಲೂ ಬಣವೆಗಾಗಿ, ತಿಪ್ಪೆಗಾಗಿ ಒತ್ತುವರಿ ಮಾಡಲಾಗುತ್ತಿದೆ. ಮೊರಂಗಾಗಿ ಕುಣಿ ಅಗೆಯಲಾಗುತ್ತಿದೆ. ಉಳಿದ ಪ್ರದೇಶದಲ್ಲಿ ಹೆಚ್ಚಾಗಿ ಮುಳ್ಳುಬೇಲಿ ಬೆಳೆದು ಹೆಣಗಳ ಅಂತ್ಯ ಸಂಸ್ಕಾರಕ್ಕೆ ಜಾಗದ ಸಮಸ್ಯೆಯಾಗಿದೆ. ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಕೊಡಿಸಿ ಎಂದು ಸ್ಮಶಾನ ಕಾರ್ಮಿಕರು ಬೇಡಿಕೆ ಇಟ್ಟಿದ್ದ ಕುಣಿ ಅಗೆಯುವ ಸಾಮಾಗ್ರಿಗಳನ್ನು ಇಲಿಯವರೆಗೂ ಕೊಡಿಸಿಲ್ಲವೆಂದು ದೂರುತ್ತಿದ್ದಾರೆ. ಸತ್ತವರನ್ನು ಹೊತ್ತೊಯ್ಯಲು ಪ್ರವೇಶದಲ್ಲಿ ದುಸ್ತರವಾಗಿದೆ. 100 ಮೀಟರ್ ಸುತ್ತುವರಿದು ಬರಬೇಕು. ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಪಡಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ತಯಾರಿಸಿ 6ತಿಂಗಳ ಕೆಳಗೆ ತಾಲೂಕು, ಜಿಲ್ಲಾ ಪಂಚಾಯಿತಿಗೆ ಕಳಿಸಲಾಗಿದೆ ಇನ್ನೂ ಅನುದಾನ ಮಂಜೂರು ಆಗಿಲ್ಲ,  ಅದೇಶ ಬಂದಿಲ್ಲ ಎನ್ನುವ ಸಿದ್ದ ಉತ್ತರ ಮಾತ್ರ ಹರಿದಾಡುತ್ತಿದೆ. ಕೂಡಲೇ ಸ್ಮಶಾನದ ಹದ್ದುಬಸ್ತು ಗುರುತಿಸಿ ಇರುವ ಜಾಗವನ್ನು ಅಭಿವೃದ್ಧಿಪಡಿಸಿ ಸುಸೂತ್ರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕೆಂಬುದು ಜನರ ಆಗ್ರಹವಾಗಿದೆ.