ದುಬಾರಿಯಾದ ಭತ್ತ ಕಟಾವು ಯಂತ್ರ ರೈತರಿಗೆ ಹೊರೆ.!

ಸುರಪುರ:ಡಿ.4: ತಾಲ್ಲೂಕಿನಾಧ್ಯಂತ ಈಗಾಗಲೇ ಭತ್ತ ಕಟಾವು ಕಾರ್ಯ ಭರದಿಂದ ಸಾಗಿದ್ದು ಅನ್ನದಾತ ಸುಗ್ಗಿ ಸಂಭ್ರಮದಿಲ್ಲಿದ್ದಾನೆ. ಕಳೆದ ಹಲವು ದಿನಗಳ ಹಿಂದೆ ಸುರಿದ ಮಳೆ ಅತಿವೃಷ್ಟಿ ಸೃಷ್ಟಿಸಿ ಅನೇಕ ಬೆಳೆಗಳು ನೆಲಸಮವಾಗಿ ನಷ್ಟ ಉಂಟಾಗಿತ್ತು. ಸಧ್ಯ ವರುಣ ವರುಪಾಗಿದ್ದು ಅನ್ನದಾತರು ಭತ್ತ ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಆದರೆ ಭತ್ತ ಕಟಾವು ಯಂತ್ರಗಳ ಏಜೆಂಟರು ಮನ ಬಂದಂತೆ ದರ ನಿಗದಿ ಮಾಡುತ್ತಿರುವುದು ಭತ್ತ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲೇ ರೈತರು ಬೆಳೆದ ಬೆಳೆ ಸರಿಯಾಗಿ ಕೈ ಸೇರದೆ, ಸರಿಯಾದ ಬೆಲೆ ಸಿಗದೆ ನಷ್ಟದಲ್ಲಿದ್ದಾರೆ. ಇದರ ಮಧ್ಯ ಕೆಲ ಏಜೆಂಟರಗಳು ಪಕ್ಕದ ರಾಜ್ಯಗಳಿಂದ ಭತ್ತ ಕಟಾವು ಯಂತ್ರಗಳನ್ನು ಕಮೀಷನ್ ಲೆಕ್ಕದಲ್ಲಿ ತಂದಿದದ್ದಾರೆ, ಸಧ್ಯ ಭತ್ತ ಕಟಾವು ಯಂತ್ರಗಳ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ರೈತರಿಂದ ಹೆಚ್ಚಿನ ಹಣ ಸುಲಿಯುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ತಾಲ್ಲೂಕಿನ ದೇವತ್ಕಲ, ಹಾಲಭಾವಿ, ಗೋಡಿಹಾಳ, ಹೆಬ್ಬಾಳ,ದೇವಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಂದು ಘಂಟೆ ಕಟಾವಿಗೆ ಸುಮಾರು 2800 ದಿಂದ 3200 ರೂ ನಿಗದಿ ಮಾಡಿದ್ದು ಇದು ಬಡ ರೈತರಿಗೆ ಹೊರೆಯಾಗಲಿದೆ. ಭತ್ತದ ಬೆಲೆ ಸಹ ಕಡಿಮೆಯಾಗಿದೆ ಮಳೆಯಿಂದಾಗಿ ಇಳುವರಿಯಲ್ಲು ಹೊಡೆತ ಬಿದ್ದಿದೆ, ಇವೆಲ್ಲದರ ಮಧ್ಯ ಭತ್ತ ಕಟಾವು ಯಂತ್ರಗಳು ಬೆಲೆ ದುಬಾರಿಯಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಸಂಬಂಧಪಟ್ಟ ತಾಲ್ಲೂಕು ಕೃಷಿ ಅಧಿಕಾರಿಗಳು ಮತ್ತು ತಹಸೀಲ್ದಾರರು ಗಮನ ಹರಿಸಿ ಭತ್ತ ಕಟಾವು ಯಂತ್ರಗಳಿಗೆ ದರ ನಿಗದಿ ಮಾಡುವುದರ ಮೂಲಕ ರೈತರ ನೆರವಿಗೆ ಬರಬೇಕಾಗಿದೆ.

ಬೆಲೆ ಏರಿಕೆ ಮತ್ತು ಅಕಾಲಿಕ ಮಳೆಯಿಂದಾಗಿ ರೈತರು ನಷ್ಟದಲ್ಲಿದ್ದಾರೆ, ಭತ್ತ ಕಟಾವು ಯಂತ್ರಗಳ ಬೆಲೆ ಹೆಚ್ಚಾಗಿದ್ದು ರೈತರಿಗೆ ಹೊರೆಯಾಗಲಿದೆ ಆದ್ದರಿಂದ ಸರಕಾರ ಭತ್ತ ಕಟಾವು ಯಂತ್ರಗಳಿಗೆ ಬೆಲೆ ನಿಗದಿ ಮಾಡಬೇಕು.

ರಾಮುನಾಯಕ ರೈತ