ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರಕ್ಕೆ ಕಿರುತೆರೆಯ ಮೋಕ್ಷಿತಾ ಪೈ ನಾಯಕಿ

ಸಲಗ ಸಿನಿಮಾ ನಿರ್ದೇಶಿಸಿ ನಾಯಕ ನಟನಾಗಿಯೂ ದುನಿಯಾ ವಿಜಯ್ ನಟಿಸಿದ್ದಾರೆ. ಇದರ ಜತೆಗೆ ಇತ್ತೀಚೆಗಷ್ಟೇ ಇನ್ನೊಂದು ಸಿನಿಮಾ ನಿರ್ದೇಶನ ಮಾಡುವುದಾಗಿ ಹೇಳಿ, ರಾಜ್ ಕುಟುಂಬದ ಲಕ್ಕಿ ಗೋಪಾಲ್​ ಅವರನ್ನು ನಾಯಕ ಎಂದು ಘೋಷಿಸಿಕೊಂಡಿದ್ದರು. ಇದೀಗ ಅದೇ ಚಿತ್ರಕ್ಕೆ ನಾಯಕಿಯನ್ನು ಅಂತಿಮ ಮಾಡಲಾಗಿದೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರಾವಳಿ ಬೆಡಗಿ ಮೋಕ್ಷಿತಾ ಪೈ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಡುವ ಕಾತರದಲ್ಲಿದ್ದಾರೆ.
ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.

ಅದರಂತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಲಕ್ಕಿ ಗೋಪಾಲ್ ಈ ಚಿತ್ರದ ಮೂಲಕ ಎಂಟ್ರಿ ಪಡೆಯುತ್ತಿದ್ದರೆ, ಪಾರು ಧಾರಾವಾಹಿ ಮೂಲಕ ನಾಡಿನ ಹೆಂಗೆಳೆಯರ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇನ್ನುಳಿದಂತೆ ಮಿಕ್ಕ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ತಾಂತ್ರಿಕ ವರ್ಗದ ಆಯ್ಕೆ ಅಂತಿಮವಾಗಿದೆ. ವಾಸುಕಿ ವೈಭವ್ ಮತ್ತು ಚರಣ್​ ರಾಜ್​ ಸಂಗೀತ, ಬಾಲು ಶಿವಮೊಗ್ಗ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು ಶೀರ್ಷಿಕೆ ಅಂತಿಮವಾಗದ ಈ ಸಿನಿಮಾಕ್ಕೆ ಇನ್ನೂ ಹಲವು ಹೊಸಬರನ್ನು ಪರಿಚಯಿಸುವ ಉಸ್ತುವಾರಿಯನ್ನು ನಿರ್ದೇಶಕರು ಹೊತ್ತಿದ್ದು, ಶೀಘ್ರದಲ್ಲಿ ಶೀರ್ಷಿಕೆ ಅಂತಿಮ ಮಾಡಿ, ಶೂಟಿಂಗ್​ ಶುರುವಾಗುವ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ವಿಜಯ್.