ದುಡ್ಡುಗಳಿಸುವುದಕ್ಕಿಂತ ಜನರ ಪ್ರೀತಿ, ವಿಶ್ವಾಸಗಳಿಸಿ: ಡಾ. ಸುರೇಶ್ ಎಲ್. ಶರ್ಮಾ

ಕಲಬುರಗಿ,ಏ.30-ಸರ್ಕಾರಿ ನೌಕರರು ದುಡ್ಡುಗಳಿಸುವುದಕ್ಕಿಂತ ಜನರ ಪ್ರೀತಿ, ವಿಶ್ವಾಸಗಳಿಸಿ ಎಂದು ಅಧೀಕ್ಷಕ ಅಭಿಯಂತರರಾದ ಡಾ. ಸುರೇಶ್ ಎಲ್. ಶರ್ಮಾ ಹೇಳಿದರು.
ನಗರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಛೇರಿಯಲ್ಲಿ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಗುರಪ್ಪ ಬಿರಾದಾರ ಅವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರಿ ನೌಕರರು ದುಡ್ಡಿನ ಹಿಂದೆ ಬೀಳದೆ ಸಾರ್ವಜನಿಕರೊಂದಿಗೆ ಬೆರೆತು, ಅವರ ಕೆಲಸ ಮಾಡಬೇಕು. ತಾವೂ ಸೇವೆಯಿಂದ ನಿವೃತ್ತಿ ಹೊಂದಿದ್ದರು ಜನರ ಮಾತುಗಳಲ್ಲಿ ಇರಬೇಕು. ಸೇವಾ ನಿವೃತ್ತಿ ಸಮಾರಂಭಗಳಲ್ಲಿ ತಂದೆ-ತಾಯಿಯರು ಬರೋದು ಬಹಳ ವಿರಳ. ಆದರೆ ಶಿವಾನಂದರ ಸೇವಾ ನಿವೃತ್ತಿ ದಿನ ಅವರ ತಂದೆ ಬಂದಿರೋದು ಸಂತೋಷದ ವಿಚಾರ. ಶಿವಾನಂದ ಅವರು ತಮ್ಮ ಕಛೇರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇವರು ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗಿಲ್ಲ. ಇವರ ಮುಂದಿನ ಜೀವನ ಸುಖಮಯವಾಗಲಿ ಎಂದು ಹಾರೈಸಿದರು.
ಕಾರ್ಯನಿರ್ವಾಹಕ ಅಭಿಯಂತರರಾದ ನರೇಂದ್ರಕುಮಾರ ಎಮ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾ ಶಾಂತಪ್ಪ ಜಾದವ, ಕಛೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.