ದುಡ್ಡಿಗಾಗಿ ಆತ್ಮಹತ್ಯೆ: ಶಿವಾನಂದ ಪಾಟೀಲ್‌ ಹೇಳಿಕೆಗೆ ಎಎಪಿ ತೀವ್ರ ಆಕ್ರೋಶ

ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೭;೫ ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಹೆಚ್ಚಿದೆ ಎಂಬ ಹೇಳಿಕೆ ನೀಡಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಅವರ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.ಸುದ್ದಿಗೋಷ್ಠಿಯಲ್ಲಿ ಸಚಿವರ ಹೇಳಿಕೆ ಖಂಡಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್ ಶಿವಕುಮಾರಪ್ಪ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.ಅನ್ನದಾತರ ಬಗ್ಗೆ ಸಚಿವರು ಕೇವಲವಾಗಿ ಮಾತನಾಡಿದ್ದಾರೆ, ಕುಟುಂಬಕ್ಕೆ ಆಧಾರವಾದ ರೈತ ಸಾಲದ ಸುಳಿಗೆ ಸಿಲುಕಿ ಬೆಳೆ ನಷ್ಟದಿಂದ, ಶ್ರಮಕ್ಕೆ ತಕ್ಕ ಬೆಲೆ ಸಿಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಾಗ ರೈತರ ಕುಟುಂಬ ಆರ್ಥಿಕವಾಗಿ ಕುಸಿಯದಿರಲಿ ಎಂಬ ಕಾರಣಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತಿದೆ, ಆದರೆ ಪರಿಹಾರ ಸಿಕ್ಕುತ್ತದೆ ಎಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿರುವುದು ಖಂಡನೀಯ ಎಂದರು.2020ರಲ್ಲಿ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು, ಆದರೆ 2022 ರಲ್ಲಿ 651 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಸಿಕ್ಕುತ್ತೆ ಅನ್ನೋ ದುರಾಸೆ ಮನಸ್ಸಲ್ಲಿ ಬರುತ್ತೆ ಎಂದು ಹೋಲಿಕೆ ಮಾಡಿ ಹೇಳಿದ್ದಾರೆ ಇದು, ದುರಾದೃಷ್ಟಕರ ಹೇಳಿಕೆಯಾಗಿದೆ. ರೈತ ದೇಶದ ಬೆನ್ನಲುಬು ಎಂಬುದನ್ನು ಮರೆಯಬಾರದು, ಆತನ ಕಷ್ಟಗಳಲ್ಲಿ ಪಾಲುದಾರರಾಗಿ, ಹೆಗಲಾಗಿ ರಾಜ್ಯ ಸರ್ಕಾರ ಭಾಗಿದಾರನಾಗಬೇಕು. ಅದು ಬಿಟ್ಟು ರೈತರ ಬಗ್ಗೆ ಹಗುರವಾಗಿ ಮಾತನಾಡಕೂಡದು ಎಂದರು. ಕಾರ್ಯದರ್ಶಿ ಕೆ.ರವೀಂದ್ರ ಮಾತನಾಡಿಸರ್ಕಾರದ ಬಳಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡಲು ದುಡ್ಡಿಲ್ಲದಿದ್ದರೆ ನೇರವಾಗಿ ಹೇಳಿಕೆ ನೀಡಲಿ ಅದು ಬಿಟ್ಟು ದುಡ್ಡಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಣಕಿಸಬಾರದು. ರೈತರು ಸ್ವಾಭಿಮಾನಿಗಳಾಗಿದ್ದಾರೆ. ಮುಖ್ಯಮಂತ್ರಿಗಳು ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ `ಆಮ್ ಆದ್ಮಿ, ಪಕ್ಷವು ರಾಜ್ಯಾದ್ಯಂತ  ಪ್ರತಿಭಟನೆ ನಡೆಸಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೆ.ಎಲ್ ರಾಘವೇಂದ್ರ, ಸಿ.ಆರ್ ಅರುಣ್ ಕುಮಾರ್,ಎಸ್.ಕೆ ಆದಿಲ್ ಖಾನ್,ಸಿಡ್ಲಪ್ಪ ಸುರೇಶ್ ಉಪಸ್ಥಿತರಿದ್ದರು.