“ದುಡಿಯೋಣ ಬಾ” ಜಾಗೃತಿ ಅಭಿಯಾನಕ್ಕೆ ಚಾಲನೆ

ಬ್ಯಾಡಗಿ, ಮಾ 25: ನರೇಗಾ ಯೋಜನೆಯಡಿ `ದುಡಿಯೋಣ ಬಾ’ ಅಭಿಯಾನ ನಡೆಸಲಾಗುತ್ತಿದ್ದು, ಬೇಸಿಗೆಯಲ್ಲೂ ಆಯಾ ಗ್ರಾಮಗಳಲ್ಲೇ ಸ್ಥಳೀಯರಿಗೆ ಉದ್ಯೋಗ ಒದಗಿಸಿಕೊಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ.ಜಯಕುಮಾರ ಹೇಳಿದರು.

ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ಬುಧವಾರ ನರೇಗಾ ಯೋಜನೆಯ “ದುಡಿಯೋಣ ಬಾ” ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಮಾರ್ಚ್ 15ರಿಂದ ಜೂನ್ 15ರವರೆಗೆ ಮೂರು ತಿಂಗಳ ಅವಧಿಗೆ, ನರೇಗಾ ಯೋಜನೆ ಅಡಿಯಲ್ಲಿ `ದುಡಿಯೋಣ ಬಾ’ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನದಡಿ ಪ್ರತಿ ಕುಟುಂಬಕ್ಕೆ ನೂರು ದಿನ ಸತತ ಉದ್ಯೋಗ ನೀಡಲಾಗುವುದು. ಯೋಜನೆಯಿಂದ ಹೊರಗುಳಿದವರಿಗೂ ಕೆಲಸ ಕೊಡಲಾಗುವುದು. ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನರೇಗಾ ಯೋಜನೆಯ ತಾಲೂಕಾ ಸಹಾಯಕ ನಿರ್ದೇಶಕ ಶಂಕರ ಕಿಚಡಿ ಮಾತನಾಡಿ, ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಕೆಲಸ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಅಭಿಯಾನ ಉದ್ದೇಶವಾಗಿದೆ ಎಂದು ತಿಳಿಸಿದರು.

ತಾಲೂಕಾ ಐಇಸಿ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ ನಿರ್ಮಿಸಲಾಗುವುದು. ಕೆರೆಗಳ ಸಮಗ್ರ ಅಭಿವೃದ್ಧಿ, ರಸ್ತೆಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಗುಂಡಿ ತೆಗೆಸುವುದು ಸೇರಿದಂತೆ ಇತರೆ ಕೆಲಸ ಮಾಡಲು ಅವಕಾಶ ಇದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಯಲ್ಲನಗೌಡ ಕರೇಗೌಡ್ರ, ಎಪಿಎಂಸಿ ಮಾಜಿ ನಿರ್ದೇಶಕ ರಮೇಶ ಸುತ್ತಕೋಟಿ, ಗ್ರಾಪಂ ಸದಸ್ಯ ಭಾಷಾಸಾಬ್ ದೊಡ್ಡಮನಿ ಹಾಗೂ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.