ದುಡಿಯೋಣ ಬಾ ಅಭಿಯಾನದ ಲಾಭ ಪಡೆಯಿರಿ ತಾಲೂಕು ಪಂಚಾಯತ್ ಇಒ ಡಾ.ಡಿ.ಮೋಹನ್ ಸಲಹೆ

ಕನಕಗಿರಿ, ಏ.08: ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನ ಶುರುಮಾಡಿದ್ದು, ೬೦ ದಿನ ದುಡಿದರೆ ೧೭,೩೪೦ ರೂ. ಪಡೆಯಬಹುದು. ವರ್ಷದಲ್ಲಿ ನರೇಗಾದಡಿ ೧೦೦ ದಿನ ದುಡಿಯಲು ಅವಕಾಶವಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಹೇಳಿದರು.
ತಾಲೂಕಿನ ಜಿರಾಳ ಗ್ರಾಪಂ ವ್ಯಾಪ್ತಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಬೇಸಿಗೆ ಅವಧಿಯಲ್ಲಿ ಕೂಲಿಕಾರ್ಮಿಕರಿಗೆ ಊರಲ್ಲಿ ಕೆಲಸ ಇಲ್ಲದನ್ನು ಮನಗಂಡು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ೬೦ ದಿನ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಹಮ್ಮಿಕೊಂಡಿದೆ. ನರೇಗಾ ಕೂಲಿಯೂ ೨೭೫ ರಿಂದ ೨೮೯ ರೂ.ಗೆ ಹೆಚ್ಚಳವಾಗಿದೆ. ಕಾರ್ಮಿಕರು ಗುಳೆ, ವಲಸೆ ಹೋಗದೆ ಯೋಜನೆ ಲಾಭ ಪಡೆದುಕೊಳ್ಳಬೇಕು. ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿ ಕೈಗೊಳ್ಳಬಹುದು. ಜಾಬ್ ಕಾರ್ಡ್ ಇದ್ದವರು ಕೆಲಸ ಮಾಡಲು ಮುಂದಾಗಬೇಕು. ಜಾಬ್‌ಕಾರ್ಡ್ ಇಲ್ಲದವರು ಪಂಚಾಯತಿಗೆ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿ ಉದ್ಯೋಗ ಚೀಟಿ ಪಡೆಯಬೇಕು. ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿ ಇದ್ದೂರಲ್ಲೇ ಕೆಲಸ ಮಾಡಲು ಮುಂದಾಗಬೇಕು. ಮಹಿಳೆಯರು, ಪುರುಷರಿಗೂ ಉದ್ಯೋಗ ಖಾತ್ರಿಯಡಿ ಸಮಾನ ಕೂಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಾಗೃತಿ: ನರೇಗಾ ಯೋಜನೆ ಜಾಗೃತಿ, ಕೂಲಿ ಹೆಚ್ಚಳದ ಮಾಹಿತಿಯುಳ್ಳ ನಾಮಫಲಕದಿಂದ ಕೂಲಿಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.
ಪಿಡಿಒ ರವೀಂದ್ರ ಕುಲಕರ್ಣಿ, ನರೇಗಾ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಶಿವಕುಮಾರ್.ಕೆ, ಟಿಎಇ ಶರಣಯ್ಯ ಸ್ವಾಮಿ, ಗ್ರಾಪಂ ಸಿಬ್ಬಂದಿ ಕನಕರಾಯ, ಸಿದ್ದು, ಕಾಯಕಬಂಧುಗಳು ಸೇರಿ ಇತರರಿದ್ದರು.