ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ

ಸವಣೂರ,ಮಾ16: ತಾಲೂಕ ಪಂಚಾಯತಿ ವತಿಯಿಂದ ಮಾ.15 ರಿಂದ 3 ತಿಂಗಳ ವರೆಗೆ ನಡೆಯಲಿರುವ ದುಡಿಯೋಣ ಬಾ ಅಭಿಯಾನಕ್ಕೆ ತಾ.ಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣವರ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂರ್ದದಲ್ಲಿ ಎಂಜಿ.ಎನ್‍ಆರಿಜಿ ಸಹಾಯಕ ನಿರ್ಧೇಶಕರಾದ ಎಸ್.ಎಚ್.ಅಮರಾಪೂರ ಮಾತನಾಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ, ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು, ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು. ಈ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿ, ಮುನಿಯಪ್ಪ ಪಿ. ಮಾತನಾಡಿ, ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರಿಂದ 100 ರೈತರ ಜಮೀನುಗಳಲ್ಲಿ ಬದು, ಕೃಷಿಹೊಂಡ, ತೆರೆದಬಾವಿ, 50 ಇಂಗು ಗುಂಡಿ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಛೇತನ, ಕೆರೆ ಹೂಳು ತೆಗೆಯುವುದು, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಹಾಗೂ ಬೋರವೆಲ್ ರಿಚಾರ್ಜ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗುವುದು ಎಂದರು

ಕಾರ್ಯಕ್ರಮದಲ್ಲಿ ಕುರುಬರಮಲ್ಲೂರ, ಹೂವಿನಶಿಗ್ಲಿ, ಮಂತ್ರೋಡಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ತಾಲೂಕ ಪಂಚಾಯತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.