ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ

ರಾಯಚೂರು, ಮಾ.೨೮:- ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ರಾಯಚೂರು ತಾಲೂಕಿನ ಕಮಲಾಪೂರು, ಪೂರತಿಪ್ಲಿ, ಎನ್. ಮಲ್ಕಾಪೂರು ಹಾಗೂ ಬಾಯಿದೊಡ್ಡಿ, ಯದ್ಲಾಪೂರು ಗ್ರಾಮ ಪಂಚಾಯತಿಗಳಲ್ಲಿ ಚಾಲನೆ ನೀಡಲಾಯಿತು.
ಮಾರ್ಚ್ ೧೫ ರಿಂದ ಈ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಪ್ರಾರಂಭವಾಗಿದ್ದು, ಏಪ್ರೀಲ್ ಒಂದರಿಂದ ಮುಂದಿನ ಮೂರು ತಿಂಗಳವರೆಗೆ ಗ್ರಾಮೀಣ ಭಾಗದ ಜನರಿಗೆ ಬೇಸಿಗೆ ಸಮಯದಲ್ಲಿ ನಿರಂತರವಾಗಿ ಕೂಲಿ ಕೆಲಸ ಒದಗಿಸಲಾಗುತ್ತದೆ. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು
ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗುತ್ತದೆ.
ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ, ಸ್ವಾವಲಂಬಿಗಳಾಗಿ ಬದುಕುವಂತೆ ರೂಪಿಸುವ ಈ ಯೋಜನೆಯಡಿ ಕನಿಷ್ಠ ೬೦ ದಿನಗಳು ಕೂಲಿ ಕೆಲಸ ಮಾಡಿದರೆ ೧೭,೩೪೦ ರೂ.ಗಳ ಕೂಲಿ ಪಡೆದುಕೊಳ್ಳಬಹುದು ಈ ಹಣ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಇನ್ನೂ ಮುಂತಾದವುಗಳಿಗೆ ಬಳಸಿಕೊಳ್ಳಲು ಅನುಕೂವಾಗುತ್ತದೆ.
ಎಲ್ಲಾ ಗ್ರಾಮಗಳಲ್ಲಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ ಮಾಡಿಕೊಳ್ಳಲು ವಿಫುಲ ಅವಕಾಶಗಳಿವೆ ಹಾಗೂ ಬಚ್ಚಲು ಇಂಗು ಗುಂಡಿ ನಿರ್ಮಾಣ, ತೋಟಗಾರಿಕೆ ಬೆಳೆಗಳು ಮಾವು, ಪೇರಲೆ, ದಾಳಿಂಬೆ, ನಿಂಬೆ, ನುಗ್ಗೆ ಮತ್ತು ಗುಲಾಬಿ ಹೂ, ಮಲ್ಲಿಗೆ ಹೂ, ವಿಲೆದೆಲೆ ತೋಟ ಬೆಳೆಗಳನ್ನು ಇನ್ನು ಮುಂತಾದವುಗಳನ್ನು ನರೇಗಾ ಯೋಜನೆಯಿಂದ ಪಡೆಯಲು ಅವಕಾಶಗಳಿದ್ದು, ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ಇಪ್ಪತ್ತು ಜನಕ್ಕೆ ಒಬ್ಬ ಕಾಯಕ ಬಂಧುಗಳ ಕಾರ್ಯ ಅತ್ಯಂತ ಪ್ರಮುಖವಾಗಿದೆ.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕರ ವಸೂಲಿಗಾರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತು ಗ್ರಾಮದ ಕೂಲಿಕಾರರು ಭಾಗವಹಿಸಿದ್ದರು.