ದುಡಿಯುವ ವರ್ಗದ ಮೇಲೆ ಶೋಷಣೆ

ದಾವಣಗೆರೆ.ಮೇ.೧; ದುಡಿಯುವ ವರ್ಗದ ಮೇಲಿನ ಶೋಷಣೆ, ದಬ್ಬಾಳಿಕೆಯನ್ನು ನಿಲ್ಲಿಸಬೇಕಾದರೆ ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು ಎಂದು ಎ.ಐ.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಹೆಚ್.ಜಿ.ಉಮೇಶ್ ಕರೆ ನೀಡಿದರು. 136 ನೇ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ದಾವಣಗೆರೆಯ ಹೊರ ವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು. ಕಾರ್ಮಿಕರಿದ್ದರೆ ಉತ್ಪಾದನೆ, ಉತ್ಪಾದನೆಯಿದ್ದರೆ ಮಾತ್ರ ದೇಶ ಸುಭೀಕ್ಷೆಯಿಂದ ಇರಲು ಸಾಧ್ಯ. ಆದರೆ ಆಳುವ ಸರಕಾರಗಳು ಯಾವತ್ತಿಗೂ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸಿಕೊಂಡು ಬರುತ್ತಿವೆ. ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನೇ ಕೊಡುತ್ತಿಲ್ಲ. ಉದ್ಯೋಗ ಭದ್ರತೆ ನೀಡದೇ ಕೇವಲ ತಾತ್ಕಾಲಿಕವಾಗಿ ನೌಕರಿಗೆ ನೇಮಕ ಮಾಡಿಕೊಂಡು ಕಡಿಮೆ ವೇತನ ಸೌಲಭ್ಯಗಳನ್ನು ನೀಡಿ ಶೋಷಣೆ ಮಾಡಲಾಗುತ್ತಿದೆ‌. ಮಾಲೀಕ ವರ್ಗದ ಒತ್ತಡದಿಂದಾಗಿ ಕೇಂದ್ರ ಸರಕಾರವು ಸತತವಾಗಿ ಕಾರ್ಮಿಕರ ಹಿತ ರಕ್ಷಿಸುವಂತಹ ಕಾನೂನುಗಳ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ದುಡಿಯುವ ವರ್ಗವನ್ನು ಕಷ್ಟಕ್ಕೆ ತಳ್ಳುತ್ತಿದೆ. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾರ್ಮಿಕ ಕಾಯಿದೆಗಳಿಗೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ ಎಂದರೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆ ಅತ್ಯಂತ ಸ್ಪಷ್ಟವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಕಾರ್ಮಿಕ ಮುಖಂಡ ಕೆ‌.ರಾಘವೇಂದ್ರ ನಾಯರಿ, ಆಂಜನೇಯ ಕಾಟನ್ ಮಿಲ್ ಎಂಪ್ಲಾಯೀಸ್ ಯೂನಿಯನ್‌ನ ಪದಾಧಿಕಾರಿಗಳಾದ ಮಹೇಶ್, ಎಸ್ ಜಯಪ್ರ, ಹಾಲೇಶ್ ನಾಯ್ಕ್, ಶಿವಕುಮಾರ್, ಅಜೀಜ್ ಅಹಮದ್, ಚಿತ್ರಪ್ಪ,  ಲಕ್ಷ್ಮಮ್ಮ, ನಾಗಮ್ಮ, ಕುಸುಮಮ್ಮ, ಪಾರ್ವತಮ್ಮ, ಸುಜಾತ,  ಮಂಜಮ್ಮ, ರಮೇಶ,  ಸಂಜುಕುಮಾರ್ ಮತ್ತಿತರ ಕಾರ್ಮಿಕರು ಉಪಸ್ಥಿತರಿದ್ದರು.
ಕೋವಿಡ್ ಹಿನ್ನಲೆಯಲ್ಲಿ ಕಾರ್ಮಿಕ ದಿನಾಚರಣೆಯನ್ನು ಯಾವುದೇ ಮೆರವಣಿಗೆಗಳಿಲ್ಲದೇ ಈ ಬಾರಿ ಅತ್ಯಂತ ಸರಳವಾಗಿ ಸರಕಾರದ ನಿಯಮಾವಳಿಗಳನ್ನು ಪಾಲಿಸುವುದರ ಮೂಲಕ ಆಚರಿಸಲಾಯಿತು.