ದುಡಿಮೆ ಅವಧಿ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ದಾವಣಗೆರೆ, ಆ. ೯- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಈ ವೇಳೆ ಕಾರ್ಮಿಕ ಮುಖಂಡ ಆವರಗೆರೆ ಚಂದ್ರು ಮಾತನಾಡಿ
ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಕಳೆದ ೯ ವರ್ಷಗಳಿಂದ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ನೀಡಿದೆ. ನಿರುದ್ಯೋಗವು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನೋಟು ಅಮಾನೀಕರಣದಿಂದ ಸಣ್ಣಪುಟ್ಟ ಸ್ವಯಂ ಉದ್ಯೋಗಿಗಳು ಬೀದಿ ಪಾಲಾಗಿದ್ದಾರೆ. ಬಡತನವು ಹೆಚ್ಚಾಗಿ ಆರ್ಥಿಕ ಕುಸಿತವು ತಲೆದೊರಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರು ನೇಮಕಾತಿಗಳು ಆಗುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಕೇಂದ್ರ ಸರ್ಕಾರವು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು, ನೌಕರರನ್ನು ವಜಾ ಗೊಳಿಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ಗುತ್ತಿಗೆ ಪದ್ಧತಿ ಜಾರಿಗೊಳಿಸಲಾಗುತ್ತಿದೆ. ಗುತ್ತಿಗೆ ಪದ್ಧತಿಯಿಂದ ಇಎಸ್ ಐ ಮತ್ತು ಪಿ ಎಫ್ ಹಾಗೂ ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಇನ್ನೂ ಹತ್ತು ಹಲವು ರೀತಿಯ ಸಂಕಷ್ಟಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದರು. ದುಡಿತದ ಅವಧಿಯನ್ನು ೮ರಿಂದ ೧೨ ಕ್ಕೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು. ಜೀವನ ಯೋಗ್ಯ ವೇತನ ರೂ ೩೧,೫೦೦ ಕೈ ಹೆಚ್ಚಿಸಬೇಕು. ಕಾರ್ಮಿಕ ವಿರೋಧಿ ನಾಲ್ಕು ಲೆಬರ್ ಕೋಡ್‌ಗಳನ್ನು ರದ್ದು ಪಡಿಸಬೇಕು.
ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಮಾಸಿಕ ೮ ಸಾವಿರ ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆ, ಮನರೇಗಾ ದುಡಿತದ ದಿನ ೨೦೦ಕ್ಕೆ ಹೆಚ್ಚಿಸಬೇಕು.
ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಟ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು. ವಿದ್ಯುತ್ ಶಕ್ತಿ ಮಸೂದೆ ೨೦೨೦ ಅನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್ .ಜಿ.ಉಮೇಶ್,ಸತೀಶ್ ಅರವಿಂದ್,ಜಬೀನಾ ಖಾನಂ,ರಮೇಶ್ ನಾಯ್ಕ್,ಕೆ.ಬಾನಪ್ಪ,ಚಿನ್ನಪ್ಪ,ನಾಗಮ್ಮ,ಮುಸ್ತಫಾ,ಪವಿತ್ರ, ಯಲ್ಲಪ್ಪ,ಆದಿಲ್ ಖಾನ್,ಶರೀಫ್ ಅಹಮದ್ ಸೇರಿದಂತೆ ಅನೇಕರಿದ್ದರು.