*ದುಡಿತವೇ ಜೀವದ  ಆರಾಮು!*

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾಚನಾಯಕನಹಳ್ಳಿ ಎಂಬ ಗ್ರಾಮದಲ್ಲಿ *ಬಸಜ್ಜ* ನೆಂಬ ಒಬ್ಬ ರೈತನಿದ್ದನು. ಅವನಿಗೆ ಮೂರು ಜನ ಗಂಡು ಮಕ್ಕಳು, ಐದು ಜನ ಹೆಣ್ಣು ಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ಅವರವರ ಜೀವನದಲ್ಲಿ ಎಲ್ಲರೂ ನೆಮ್ಮದಿಯಾಗಿದ್ದರು. ಬಸಜ್ಜನಿಗೆ ಎಂಬತ್ತೈದು  ವರ್ಷ  ವಯಸ್ಸಾಗಿದ್ದರೂ  ತನ್ನ ತೋಟದಲ್ಲಿ ಅಡಿಕೆ ಗಿಡಗಳಿಗೆ ನೀರು ಉಣಿಸುವುದು, ಕಳೆ ಕೀಳುವುದು, ತರಕಾರಿ ಸೊಪ್ಪು ಬೆಳೆದು ಮಾರುವುದು, ಅಡಿಕೆ ಫಸಲು ಬಂದಾಗ, ಹತ್ತಿಪ್ಪತ್ತು  ಕೆಜಿ ಇರುವ ತಾನೇ ಕೈಯ್ಯಾರ ಬೇಯಿಸಿ, ಒಣಗಿಸಿದ  ಅಡಿಕೆಯನ್ನು  ಹೊತ್ತು, ಬರಿಗಾಲಿನಲ್ಲಿ ಚನ್ನಗಿರಿ ತನಕ ನಡೆದುಕೊಂಡು  ಹೋಗಿ ಅಲ್ಲಿನ  ಮಾರುಕಟ್ಟೆಯಲ್ಲಿ  ಮಾರಾಟ ಮಾಡಿ ಬಂದ ಹಣದಲ್ಲಿ ಮನೆ ಖರ್ಚು ಹಾಗೂ ತನ್ನ ಹೆಣ್ಣುಮಕ್ಕಳ ಮದುವೆ ಖರ್ಚಿಗೆಂದು ಮಾಡಿದ ಸಾಲವನ್ನು ತೀರಿಸುವುದು,ತನ್ನ ಹಳ್ಳಿಯ ಬಡ ಜನರು ಕಾಯಿಲೆ ಮಲಗಿದ್ದರೆ, ಬಡ ಬಸಿರು ಬಾಣಂತಿ ಹೆಣ್ಣುಮಕ್ಕಳಿಗೆ ಔಷಧಿ, ಹಣ್ಣು ಹಂಪಲು ಕೊಡಿಸುವುದು, ಹೀಗೆ ನಿತ್ಯ ಚೈತನ್ಯ ಚಿಲುಮೆಯಂತೆ,  ದುಡಿಯುವ ಯುವಕರಿಗೆ  ಮೌನಕೃತಿಯ ಪಾಠದಂತೆ, ಕಾಯಕವೇ ಕೈಲಾಸ ಎಂಬಂತೆ ಕೆಲಸ ಮಾಡುತಿದ್ದನು, ಗಂಡು ಮಕ್ಕಳಿಗೂ ಕೂಡ ತನ್ನ ಹೆಣ್ಣು ಮಕ್ಕಳ ಮದುವೆಯ ಖರ್ಚಿನ ಸಾಲದ ಜವಾಬ್ದಾರಿ ನೀಡದೆ, ಅದು ತನ್ನ ಕರ್ತವ್ಯ ಎಂಬಂತೆ ಬೇಸರವಿಲ್ಲದೆ ದುಡಿಯುತಿದ್ದನು. ಅಷ್ಟೇ ಅಲ್ಲದೆ, ತನ್ನ  ಮದುವೆಯಾದ  ಹೆಣ್ಣುಮಕ್ಕಳ ಪತಿ ಮನೆಯ ಸಂಕಷ್ಠಕ್ಕೂ ಆಗಾಗ  ಸಹಾಯ ಮಾಡುತಿದ್ದನು. ಅಜ್ಜ ನಿನಗೆ ಸಾಕು ಅಂತ ಅನ್ನಿಸುವುದಿಲ್ಲವೇ!? ಆರಾಮಾಗಿ ಮಕ್ಕಳು ದುಡಿದುದನ್ನು  ತಿಂದು ಸುಖವಾಗಿ ಕೂತಿರಬಾರದೇ!?  ಎಂದು ಯಾರಾದರೂ ಕೇಳಿದರೆ,,,, ಗಟ ಇರೋದೇ ದುಡಿದು ತಿನ್ನೋಕೆ! ಈ ದೇಹ ಹೇಗಿದ್ದರೂ ಸವೆಯುತ್ತದೆ! ಒಂದು ದಿನ ಮಣ್ಣು ಸೇರುತ್ತದೆ! ಆರಾಮಾಗಿ ಅನ್ನುವುದು ಏನು!? ಅವರವರ ಜೀವದಿಚ್ಛೆಯದು.  ದುಡಿತವೇ ನನ್ನ ಜೀವದ ಆರಾಮು! ಚಲನೆಯಿಲ್ಲದ್ದು  ಜೀವನವೇ!?  ಎಂದು ಹೇಳುತಿದ್ದನು. ಒಂದು ದಿನಕ್ಕೂ ಸುಮ್ಮನೆ ಕೂತು ತಿನ್ನುತ್ತಿರಲಿಲ್ಲ. ಒಮ್ಮೆ ಬೆಳಿಗ್ಗೆ ಎದ್ದು ಕೊಟ್ಟಿಗೆ ಶುಚಿ ಮಾಡಿ ಆಕಳ ಕೆಚ್ಚಲಿಗೆ ಕರು ಬಿಟ್ಟು , ನಂತರ ತಂಬಿಗೆ ತುಂಬ ನೊರೆ ಹಾಲು ಕರೆದು ಅದನ್ನು ಹಿಡಿದು  ಅಡಿಗೆ ಮನೆಯತ್ತ ಬರುವಾಗ ಬಸಜ್ಜನಿಗೆ  ಪಾರ್ಶ್ವ ಹೊಡೆದು ಪ್ರಜ್ಞಾಹೀನನಾಗಿ  ಕುಸಿದು ಬಿದ್ದನು. ಮಕ್ಕಳೆಲ್ಲ ಒಳ್ಳೆ  ಆಸ್ಪತ್ರೆಗೆ  ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ತಕ್ಷಣ ಹುಷಾರಾದ ಬಸಜ್ಜ  ಸಂಪೂರ್ಣ  ಆರಾಮಾದನು. ಆದರೆ ಪಾರ್ಶ್ವವಾಯುವಿನಿಂದ ಆತನ ದೇಹ ಚಲನೆ ಕಳೆದುಕೊಂಡಿತ್ತು. ಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದ  ಬಸಜ್ಜನಿಗೆ ಕೂತು ದಿನ ಕಳೆಯುವುದು ಕಷ್ಠವಾಗಿತ್ತು. ನಾನು ಎದ್ದು ಓಡಾಡುವಂತೆ  ಚಿಕಿತ್ಸೆ ಮಾಡಿಸಿರಿ! ಇಲ್ಲವಾದರೆ ನನಗಿಂತಹ  ಜೀವನವೇ ಬೇಡ!  ನನಗೆ ಊಟ ಬೇಡ; ನೀರು ಬೇಡ; ಏನೂ ಬೇಡ,,,ಎಂದು ತನ್ನ ಹೆಂಡತಿ ರುದ್ರಜ್ಜಿಯ  ಮಾತು ಕೇಳದೆ ಹಠದಿಂದ ವರ್ತಿಸತೊಡಗಿದನು. ಆದರೆ ಔಷಧಿಯಿಂದ ಪರಿಹಾರ ಕಾಣದಷ್ಟು ಬಸಜ್ಜನ ದೇಹ ದುರ್ಬಲವಾಗಿತ್ತು. ಎದ್ದು ನಡೆಯಲಾಗದ ಈ ಶರೀರಕ್ಕೆ ಯಾಕೆ ಊಟ-ಉಪಚಾರ? ಬೇಡವೇ ಬೇಡ! ಎಂದು, ಬಸಜ್ಜ ಮುಚ್ಚಿದ ಕಣ್ಣು ತೆರೆಯದಂತೆ  ಮಲಗಿರುತಿದ್ದನು! ಯಾರಾದರೂ ಮಾತಾಡಿಸಲು  ಉಣಿಸಲು ಬಂದರೆ “ನನ್ನ ಪಾಡಿಗೆ ನನ್ನ ಬಿಡಿ” ಎಂದು ಗೋಗರೆಯುತಿದ್ದನು. ಮಲಗಿದ ಮೂರನೇ  ದಿನಕ್ಕೆ , ಹೆಂಡತಿ ರುದ್ರಜ್ಜಿಗೆ “ಎಲ್ಲರನ್ನೂ ಬರಹೇಳು” ಎಂದು ತನ್ನ  ಎಲ್ಲ ಹೆಣ್ಣು ಮಕ್ಕಳು ಮೊಮ್ಮಕ್ಕಳನ್ನೆಲ್ಲಾ  ಕರೆಸಿಕೊಂಡನು. ಕಿರಿಯ ಮಗನತ್ತ ತಿರುಗಿ ತನ್ನ ಸೊಂಟದ ಉಡಿದಾರಕ್ಕೆ ಕಟ್ಟಿಕೊಂಡಿದ್ದ, ಪಿಟಾರಿಯ ಬೀಗದ ಕೀ ನೀಡಿ, “ಎಲ್ಲ  ಸಾಲವನ್ನು  ತೀರಿಸಿದ್ದೇನೆ. ಎಲ್ಲ ಹೆಣ್ಮಕ್ಕಳಿಗೂ ‘ಕಾಯಿಖಣ’  ಕೊಡುವುದ ತಪ್ಪಿಸಬೇಡ. ನೀನು ಕೊಡದಿದ್ದರೂ ಅವರೇನೂ ಕೇಳುವುದಿಲ್ಲ. ಆದರೆ ಅವರಿಗೆ ತವರಿನ ಪ್ರೀತಿ ಕೊರತೆ ಮಾಡಬೇಡ. ಬಂದಾಗ ನಿನ್ನ ಮನೆಯಲ್ಲಿದ್ದ  ಒಂದು ಕಪ್ ಗಂಜಿ ನೀರು ಕೊಡು!” ಎಂದು ಕಿರಿಯ    ಮಗನಿಗೆ  ಹೇಳಿದನು. ಮುಂದಿನ ನಾಕಾರು ಗಂಟೆಗಳಲ್ಲಿ  ಎಲ್ಲಾ  ಮಕ್ಕಳ ಬಲವಂತಕ್ಕೆ  ಹಣ್ಣಿನ ರಸ ಕುಡಿದು, ಎಲ್ಲರೂ ನೋಡನೋಡುತ್ತಿರುವಾಗಲೇ  “ನಾನಿನ್ನೂ ಬರ್ತೀನಿ!”,,,, ಎಂದು ಕೈ ಮೇಲೆತ್ತಿ ಟಾಟಾ ಮಾಡುತ್ತಲೇ ರಿಣಮುಕ್ತ  ಬಸಜ್ಜನ  ಜೀವ   ಆತ್ಮಸಂಕಲ್ಪ  ತೊಟ್ಟಂತೆ  ದೇವರ ಸೇರಿತ್ತು!