ದುಡಿತದ ಅವಧಿ ಹೆಚ್ಚಳ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಧರಣಿ

ಕಲಬುರಗಿ,ಆ.9:ದುಡಿತದ ಅವಧಿಯನ್ನು ಹತ್ತು ಗಂಟೆಗಳ ಅವಧಿಗೆ ಹೆಚ್ಚಿಸಿರುವ ಕ್ರಮವನ್ನು ಹಿಂಪಡೆಯುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಜೀವನ ಯೋಗ್ಯ ವೇತನವನ್ನು 3,500ರೂ.ಗಳಿಗೆ ಹೆಚ್ಚಿಸುವಂತೆ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸುವಂತೆ, ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಕನಿಷ್ಠ 8000ರೂ.ಗಳ ಪಿಂಚಣಿ ಕೊಡುವಂತೆ, ಸಾರ್ವಜನಿಕ ಉದ್ಯಮಿಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸುವಂತೆ, ಉದ್ಯೋಗ ಖಾತ್ರಿ ಮನರೇಗಾದ ದುಡಿಯುವ ದಿನಗಳನ್ನು 200 ದಿನಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿದರು.
ಸ್ಕೀಮ್ ಕಾರ್ಮಿಕರಾದ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸುವಂತೆ, ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ, ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸುವಂತೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸುವಂತೆ, ಜಿಎಸ್‍ಟಿ ವ್ಯಾಪ್ತಿಯಿಂದ ಹೊರಗಿಡುವಂತೆ, ವಿದ್ಯುಚ್ಛಕ್ತಿ ಕಾಯ್ದೆ 2020ನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದರು.
ಎಂ.ಬಿ. ಸಜ್ಜನ್, ಅಶೋಕ್ ಘೂಳಿ, ಪ್ರಭುದೇವ್ ಯಳಸಂಗಿ, ನಾಗಯ್ಯಸ್ವಾಮಿ, ಮೇರಾಜ್ ಕಲ್ಯಾಣವಾಲಾ, ಹೆಚ್.ಎಸ್. ಪದಕಿ, ಹಣಮಂತರಾಯ್ ಅಟ್ಟೂರ್, ಎಸ್.ಎಂ. ಶರ್ಮಾ, ವಿ.ಜಿ. ದೇಸಾಯಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.