ದುಂದು ವೆಚ್ಚ ಕಡಿವಾಣಕ್ಕೆ ಸಾಮೂಹಿಕ ವಿವಾಹ ಅಗತ್ಯ : ಶ್ರೀಗಳು


ಸಂಜೆ ವಾಣಿ ವಾರ್ತೆ
ಕೊಟ್ಟೂರು:ಮೇ,18-  ಒಂದು ಮದುವೆ ಮಾಡಬೇಕಾದರೆ 4 ರಿಂದ 5 ಲಕ್ಷ ಬೇಕಾಗುತ್ತದೆ. ಈ ದುಂದು ವೆಚ್ಚದ ಕಡಿವಾಣಕ್ಕೆ ಇಂತಹ ಸಾಮೂಹಿಕ ವಿವಾಹ ಮಾಡಲಾಗುತ್ತದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ  ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಉಜ್ಜಿನಿ ಗ್ರಾಮದ  ಮರಳುಸಿದ್ದೇಶ್ವರ ರಥೋತ್ಸವ ನಿಮಿತ್ಯ ಮಠದ ಆವರಣದಲ್ಲಿ  ಹಮ್ಮಿಕೊಂಡಿದ್ದ  ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ನೂತನ ವಧು ವರರಿಗೆ ಆಶಿರ್ವಚನ ನೀಡಿ  ಮಾತನಾಡಿದರು.
ಜಗತ್ತಿನ 5 ಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದಲ್ಲಿ  ದಾಂಪತ್ಯಕ್ಕೆ ಕಾಲು ಇಡುತ್ತಿರುವುದು ನೀವೇ ಬಾಗ್ಯವಂತರು. ವರ್ಷದಲ್ಲಿ ನಮ್ಮ ಮಠದಲ್ಲಿ ಎರಡು ಬಾರಿ ಸಾಮೂಹಿಕ ವಿವಾಹ ಮಾಡಲಾಗುತ್ತದೆ. ಈ ಸಾಮೂಹಿಕ ವಿವಾಹದಿಂದ ಭಾರತದ ರಾಷ್ಟ್ರೀಯ ಸಂಪತ್ತಿನ ಉಳಿತಾಯವಾಗಿದೆ. ಭಾರತೀಯ ಸನ್ನತ ಧರ್ಮದಲ್ಲಿ ಗಂಡು, ಹೆಣ್ಣೆಂಬ ಭೇದಭಾವವಿಲ್ಲ. ಅದೇ ರೀತಿ ಸಂಸಾರದಲ್ಲಿ ಗಂಡಿನ ಪಾತ್ರ ಮುಖ್ಯ ಎಂಬ ಭೇದ ಮರೆತು ಎಲ್ಲಾರು ಸಮಾನರು ಎಂದು ತಿಳಿದು, ಪತಿ ಪತ್ನಿ  ಸುಖ ದುಃಖಗಳಲ್ಲಿ ಸಹಭಾಗಿತ್ವದಿಂದ ಸಂಸಾರ ನಡೆಸಬೇಕು. ಅತ್ತೆಯಾದವಳು ಸೊಸೆಯನ್ನು ಮಗಳೆಂದು ಸೊಸೆಯಾದವಳು ಅತ್ತೆಯನ್ನು ಅಮ್ಮನೆಂದು ತಿಳಿದು ಜೀವನ ನಡೆಸಿದರೆ ಮಾತ್ರ  ಸಾಮೂಹಿಕ ವಿವಾಹದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟಿದಕ್ಕೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಸಾಮೂಹಿಕ ವಿವಾಹದಲ್ಲಿ  ಕೇವಲ ನಿರ್ಗತಿಕರು, ಬಡವರು, ಮದುವೆಯಾಗುತ್ತಾರೆ ಎಂದು ತಿಳಿದುಕೊಳ್ಳುವುದು ತಪ್ಪು ಕಲ್ಪನೆ, ಮನೆ ಮುಂದೆ ಮದುವೆಯಾದರೆ ಕೇವಲ ವರ ಮತ್ತು ವಧು ಕುಟುಂಬದವರ ಆಶೀರ್ವಚನ ಸಿಗುತ್ತದೆ. ಆದರೆ ಈ  ಮಠದಲ್ಲಿ ಮೂರು ಶ್ರೀಗಳು ಮತ್ತು ಗ್ರಾಮದ ಸುತ್ತಮುತ್ತಲಿನ ವಧು-ವರರ ಕುಟುಂಬ ಸೇರಿದಂತೆ ಅನೇಕರ ಆಶೀರ್ವಚನ ಸಿಕ್ಕಿರುವುದು  ನಿಮ್ಮ ಸೌಭಾಗ್ಯ ಎಂದರು.
ನಂತರ ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮಾತನಾಡಿ ಯಾವುದೇ ಒಂದು ಮದುವೆ ಮತ್ತು ಜಾತ್ರೆ ಮಾಡಬೇಕಾದರೆ ಬಡವರು ಸಾಲ  ಮಾಡಬೇಕಾಗುತ್ತದೆ. ಈ ಮದುವೆ ದುಂದು ವೆಚ್ಚ ಕಡಿವಾಣ ಹಾಕಿ ಈ ಮಠದಲ್ಲಿ ಸಾಮೂಹಿಕ  ವಿವಾಹ ನಡೆತ್ತಿರುವುದು ಹೆಮ್ಮೆಯ ವಿಷಯ.  ದಾಂಪತ್ಯಕ್ಕೆ ಕಾಲಿಟ್ಟ ಹೆಣ್ಣನ್ನು ಗೌರವದಿಂದ ಸಂಸಾರದಲ್ಲಿ ಮುಳುಗಿಸಿಕೊಳ್ಳಿ ಎಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಸಹಾಯ ಎಂದೆಂದಿಗೂ ಇರುತ್ತದೆ ಎಂದರು.
ಲೋಕಸಭೆ ಚುನಾವಣೆಯ ಮುಗಿದ ನಂತರ ಕೂಡ್ಲಿಗಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ 16 ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟವು.
ಈ ಸಂದರ್ಭದಲ್ಲಿ ಡೋಣೂರು ಚಾನು ಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ, ಇಒ ರವಿಕುಮಾರ್, ಕಾಳಾಪುರ ಗ್ರಾ.ಪಂ.ಅದ್ಯಕ್ಷ ಸುರೇಶ್, ಉಜ್ಜಿನಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.