
ಜಗಳೂರು.ಮಾ.೧: ಸವಿತಾ ಸಮಾಜದವರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಚಿತ್ತಾಪುರ ತಾಲೂಕು ಕೊಂಚೂರು ಗ್ರಾಮ ದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಮಹಾಸ್ವಾಮಿ ಕರೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸವಿತಾ ಸಮಾಜದಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.ಹೊಟ್ಟೆ ಹಸಿವಗಿಂತ ಮಸ್ತಕದ ಹಸಿವು ನೀಗಿಸಿಕೊಳ್ಳ ಬೇಕು.ಜೊತೆಗೆ ಮಂಗಳವಾರ ಕಾಯಕ ರಜಾದಿನ ವಾರಪೂರ್ತಿ ಶ್ರಮದ ಹಣವನ್ನು ವಿನಾಕಾರಣ ವ್ಯಯಮಾಡದೆ.ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲು ಮಹಿಳೆಯರು ಜಾಗೃತ ರಾಗಬೇಕಿದೆ ಎಂದರು. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿಗಾಯಿತ್ರಿ ಮಂತ್ರವನ್ನು ಧಾರೆ ಎರೆದ ಶೋಷಿತ ಸಮುದಾಯ ಸವಿತಾ ಸಮಾಜವಾಗಿದೆ.ಎಲ್ಲಾ ಸಮಾಜದ ದಾರ್ಶನಿಕರ ಜಯಂತಿಗಳಲ್ಲಿ ಕುಣಿದು ಕುಪ್ಪಳಿಸದೆ ಅವರ ಆದರ್ಶಗಳನ್ನು ವೇದಿಕೆ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಪಸರಿಸಬೇಕು ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಸಂಘಟನೆ ,ಹೊರಾಟ ನಡೆಸಬೇಕಿದೆ ವಂಶಪರಂಪರೆ ಕಾಯಕ ತೊರೆದು ಮಕ್ಕಳು ಉನ್ನತ ಉದ್ಯೋಗ ಅವಲಂಬಿಸಬೇಕು ಡಿ ಗ್ರೂಪ್ ನೌಕರನ ಮಗ ಐ.ಎ.ಎಸ್ ಅಧಿಕಾರಿ ಯಾಗಿರುವುದಕ್ಕೆ ನಾನೇ ಕಣ್ಣಮುಂದಿನ ಸಾಕ್ಷಿ ಎಂದು ಮಾರ್ಮಿಕವಾಗಿ ವ್ಯಕ್ತಪಡಿಸಿದರು.ಉಪನ್ಯಾಸಕ ವೆಂಕಟಚಲಾಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿ,ವ್ಯಕ್ತಿಯ ಅನಗತ್ಯ ಕೇಶಗಳನ್ನು ತೆಗೆದು ಸ್ವಚ್ಛತೆಗೊಳಿಸಿ ಸುಂದರವಾಗಿಸುವ ನಾವು ಸಮಾಜದಲ್ಲಿ ಬೆಳಿಗ್ಗೆ ಎದುರುಗಡೆ ಬಂದರೆ ಅಪಶಕುನವಂತೆ ಇದು ಬದಲಾಗಬೇಕಿದೆ.ಕ್ಷೌರಿಕ ಎಂಬ ಕಾರಣದಿಂದ ವಾಸಮಾಡಲು ಬಾಡಿಗೆ ಮನೆ ನಿರಾಕರಣೆಯಿದೆ.ನಮ್ಮ ಸಮಾಜದ ಬಗ್ಗೆ ಸರಕಾರಗಳಿಗೆ ತಾತ್ಸಾರವಿದೆ.ಶಿಕ್ಷಿತರಾಗಿ ಸಂಘಟಿತರಾದರೆ ಎಲ್ಲವೂ ಮುಕ್ತವಾಗುತ್ತವೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಪಂಚಾಯಿತಿ ಆವರಣದವರೆಗೆ ಸಾರೋಟಿನಲ್ಲಿ ಸರಸ್ವತ ಸ್ವಾಮೀಜಿಯವರ ಹಾಗೂ ಸವಿತಾ ಮಹರ್ಷಿ ಭಾವಚಿತ್ರದ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.