ದುಂಡಾವರ್ತನೆ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸ್ಪಿಗೆ ಪತ್ರಕರ್ತರ ಒತ್ತಾಯ

ವಿಜಯಪುರ,ಮೇ.31: ಸಿಂದಗಿಯಲ್ಲಿ ಅಕ್ರಮ ಮರಳು ಸಾಗಾಟ ಕುರಿತು ವರದಿ ಮಾಡಿದ ಪತ್ರಕರ್ತ ಗುಂಡು ಕುಲಕರ್ಣಿಯನ್ನು ಅಪಹರಿಸಿ, ಪಿಸ್ತೂಲ್ ತೋರಿಸಿ, ಜೀವ ಬೆದರಿಕೆ ಹಾಕಿ, ದುಂಡಾವರ್ತನೆ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಪತ್ರಕರ್ತರು ಗುರುವಾರ ಎಸ್ಪಿ ಋಷಿಕೇಶ ಸೋನಾವಣೆ ಅವರಿಗೆ ಮನವಿ ಸಲ್ಲಿಸಿದರು.
ಸಿಂದಗಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕುರಿತು ಹೊಸ ದಿಗಂತ ತಾಲೂಕು ವರದಿಗಾರ ಗುಂಡು ಕುಲಕರ್ಣಿ, ಮೇ 5, 2024 ರಂದು ಪತ್ರಿಕೆಯಲ್ಲಿ ವರದಿ ಮಾಡಿದ್ದಕ್ಕೆ, ಸಿಂದಗಿ ಪೊಲೀಸ್ ಠಾಣೆ ಪಿಎಸ್‍ಐ ಭೀಮಪ್ಪ ರಬಕವಿ, ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಸುರೇಶ ಕೊಂಡಿ ಎಂಬವರು ಸೇರಿಕೊಂಡು, ಮೇ 8, 2024 ರಂದು ರಾತ್ರಿ 12 ಗಂಟೆಗೆ ಪಟ್ಟಣದಲ್ಲಿದ್ದ ವರದಿಗಾರರನ್ನು ಖಾಸಗಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ, ಬಳಿಕ ವರದಿಗಾರನ ಮೊಬೈಲ್ ಕಿತ್ತುಕೊಂಡು, ಸಿಂದಗಿ ಹೊರ ವಲಯದ ಬೈಪಾಸ್ ಬಳಿ ಕರೆದುಕೊಂಡು ಹೋಗಿ, ಕೆಳೆಗೆ ಇಳಿಸಿ ಅಕ್ರಮ ಮರಳುಗಾರಿಕೆಯ ಸುದ್ದಿ ಏಕೆ ಮಾಡಿದ್ದಿಯಾ? ಎಂದು ದುಂಡಾವರ್ತನೆ ಪ್ರದರ್ಶಿಸಿ, ದರ್ಪ ತೋರಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಅಕ್ರಮ ಮರಳು ದಂಧೆ ನಡೆಯುವ ಸ್ಥಳವಾದ ಘತ್ತರಗಿ ಸಮೀಪದ ಭೀಮಾ ನದಿಯ ಸೇತುವೆ ಬಳಿ ಕರೆದುಕೊಂಡು ಹೋಗಿ, ಮತ್ತೆ ಕಾರಿನಿಂದ ಕೆಳಗೆ ಇಳಿಸಿ ನೋಡು ಅಲ್ಲಿ ಎಷ್ಟು ಮರಳು ಸಾಗಾಟ ಮಾಡಲಾಗುತ್ತಿದೆ. ನೀನು ಏನು ಮಾಡಿಕೊಳ್ಳುವೆ? ಎಂದು ಅಶ್ಲೀಲವಾಗಿ ಬೈದು, ಸೇತುವೆ ಮಧ್ಯ ಭಾಗಕ್ಕೆ ಕರೆದುಕೊಂಡು ಹೋಗಿ, ಹಿಂಬದಿಯಿಂದ ಬಂದು ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಬಗ್ಗೆ ಶೀಘ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೊಸದಿಗಂತ ವಿಜಯಪುರ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ, ಗುಂಡು ಕುಲಕರ್ಣಿ, ಪತ್ರಕರ್ತರಾದ ಬಿ.ಡಿ. ವಡವಡಗಿ, ನಾಗೇಶ ನಾಗನೂರ, ಗುರುರಾಜ ಮಠ, ಸುದರ್ಶನ ಜಂಗಾಣಿ, ಭೋಜರಾಜ ದೇಸಾಯಿ ಇದ್ದರು.