ದೀರ್ಘ ಜೀವನಕ್ಕಿಂತ ದಿವ್ಯ ಜೀವನ ಶ್ರೇಷ್ಠ

ಕಲಬುರಗಿ, ನ.13: ಯಾವುದೇ ವ್ಯಕ್ತಿ ದೀರ್ಘಕಾಲ ಬದುಕಿ ಸಮಾಜಕ್ಕೆ ಯಾವುದೇ ಯಾವುದೇ ರೀತಿ ಕೊಡುಗೆ ನೀಡದಿದ್ದರೆ ಉಪಯೋಗವಿಲ್ಲ. ತಮ್ಮ ವೈಯಕ್ತಿಕ ಜೀವನದೊಂದಿಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ದಿವ್ಯ ಜೀವನ ಶ್ರೇಷ್ಠವಾಗುತ್ತದೆ ಎಂದು ಗುವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಸುನೀಲಕುಮಾರ ವಂಟಿ ಅಭಿಮತ ವ್ಯಕ್ತಪಡಿಸಿದರು.
ಸದಾ ವಿನೂತನ ಕಾರ್ಯಕ್ರಮಗಳು, ನಿರಂತರ ಸಮಾಜ ಸೇವೆಯನ್ನು ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಉಪನ್ಯಾಸಕ, ಚಿಂತಕ, ಸಮಾಜ ಸೇವಕ ಎಚ್.ಬಿ.ಪಾಟೀಲರ 41ನೇ ಜನ್ಮದಿನಾಚರಣೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ನಗರದ ರಾಮಮಂದಿರ-ಹೈಕೋರ್ಟ್ ರಿಂಗ್ ರಸ್ತೆಯ ನವಲದಿ ಬಡಾವಣೆ, ಜೇವರ್ಗಿ ರಸ್ತೆಯ ಎನ್.ಜಿ.ಓ ಕಾಲನಿಯಲ್ಲಿ ಅನೇಕ ಸಸಿಗಳನ್ನು ನೆಡುವ ಮತ್ತು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕ.ರಾ.ಪ್ರಾ.ಶಾಲೆಯ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ ನೀಲಕಂಠಯ್ಯ ಹಿರೇಮಠ ಮಾತನಾಡಿ, ನಾವು ಮಾಡುವ ಯಾವುದೇ ಆಚರಣೆ ಕೇವಲ ಸಾಂಕೇತಿಕವಾಗಿರದೆ, ಸಮಾಜಕ್ಕೆ ಸಂದೇಶ ನೀಡುವ ಹಾಗೂ ಉಪಯುಕ್ತವಾಗಿರಬೇಕು. ಈ ನಿಟ್ಟಿನಲ್ಲಿ ಎಚ್.ಬಿ.ಪಾಟೀಲ ಅವರು ಕಳೆದ ಅನೇಕ ವರ್ಷಗಳಿಂದ ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಎಚ್.ಬಿ.ಪಾಟೀಲ,ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ, ಪ್ರಮುಖರಾದ ಸುಷ್ಮಾ ಎಸ್.ಹೊಸದೊಡ್ಡಿ, ಸಿಂಚನಾ, ಆರೂಷಿ, ಮಹೇಶ ಮುಗಳಿ ಸೇರಿದಂತೆ ಮತ್ತಿತರರಿದ್ದರು.