ದೀಪಾವಳಿ, 45 ಮಂದಿ ಬಾಳಿಗೆ ಕಾರ್ಗತ್ತಲು

ಬೆಂಗಳೂರು, ನ. ೬- ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಲು ಹೋದ ೨೫ಕ್ಕೂ ಹೆಚ್ಚು ಮಕ್ಕಳ ಕಣ್ಣುಗಳಿಗೆ ಹಾನಿಯಾಗಿದ್ದು, ೨೦ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ.
ಕಣ್ಣಿಗೆ ಹಾನಿಗೊಂಡ ಮಕ್ಕಳು ಮಿಂಟೋ, ನಾರಾಯಣ ನೇತ್ರಾಲಯ, ಕಾಮಾಕ್ಷಿ ಇನ್ನಿತರ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಟ್ಟ ಗಾಯಕ್ಕೆ ಒಳಗಾದವರು ವಿಕ್ಟೋರಿಯಾ, ಬೌರಿಂಗ್, ಮತ್ತಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಯಾದ ೧೬ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡರೆ, ನಾರಾಯಣ ನೇತ್ರಾಲಯದಲ್ಲಿ ೬ ಮಂದಿ, ಇನ್ನಿತರ ಆಸ್ಪತ್ರೆಗಳಲ್ಲಿ ಐದಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ.
೬-೭ ಮಂದಿಯನ್ನು ಬಿಟ್ಟರೆ ಉಳಿದೆಲ್ಲರೂ ಚಿಕಿತ್ಸೆ ಪಡೆದುಕೊಂಡು ಮನಗೆ ಮರಳಿದ್ದಾರೆ. ಪಟಾಕಿ ಸಿಡಿಸುವಾಗ ೯ ವರ್ಷದ ಬಸವನಗುಡಿಯ ಹರ್ಮಾನ್‌ಖಾನ್ ಎಂಬ ಬಾಲಕ ಮುಖದ ಮೇಲಿನ ಚರ್ಮ, ಕಣ್ಣುಗಳಿಗೂ ಹಾನಿಯಾಗಿದ್ದು, ಆತ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಬಾಲಕ ಪ್ರಜ್ವಲ್‌ನ ಕಣ್ಣನ್ನು ಪರೀಕ್ಷಿಸುತ್ತಿರುವ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ಪರೀಕ್ಷಿಸುತ್ತಿರುವುದು.


ಕಣ್ಣುಗಳ ಮೇಲ್ಭಾಗದ ಚರ್ಮ ಸುಟ್ಟಿದ್ದು, ದೃಷ್ಟಿಗೆ ಯಾವುದೇ ಹಾನಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಾಮರಾಜಪೇಟೆಯ ಕೆಜಿ ನಗರದ ೧೬ ವರ್ಷದ ಬಾಲಕ ಅಭಯ್ ಹೂಕುಂಡ ಹಚ್ಚುವಾಗ ಕಣ್ಣಿಗೆ ಸಿಡಿದು, ಹಾನಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ತಿಳಿಸಿದ್ದಾರೆ.
ನಾಗರಬಾವಿಯ ೯ ವರ್ಷ ಪ್ರಜ್ವಲ್ ಬಿಜಿಲಿ ಪಟಾಕಿ ಹಚ್ಚುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದು, ಆತನಿಗೂ ಚಿಕಿತ್ಸೆ ನೀಡಲಾಗಿದೆ. ಗೋರಿಪಾಳ್ಯದ ಹಾರ್ಮೈನ್ ಎಂಬ ೫ ವರ್ಷದ ಬಾಲಕ ಭೂಚಕ್ರ ಹಚ್ಚುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದು, ಅವನಿಗೆ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಂಜನಪ್ಪ ಗಾರ್ಡನ್‌ನ ೩೭ ವರ್ಷದ ಶ್ರೀರಾಮ್ ಎಂಬುವರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಅವರ ಕಣ್ಣಿನ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಿವಾಜಿನಗರದ ಕಾಮರಾಜ ರಸ್ತೆಯ ೩೭ ವರ್ಷದ ಹರಿಪ್ರಸಾದ್ ಸರ ಪಟಾಕಿ ಹಚ್ಚುವಾಗ ಕಣ್ಣಿನ ರೆಪ್ಪೆಗೆ ಹಾನಿಮಾಡಿಕೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ದೃಷ್ಟಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸುಜಾತ ರಾಥೋಡ್ ಹೇಳಿದ್ದಾರೆ.
ಅಗ್ರಹಾರ ದಾಸರಹಳ್ಳಿಯ ೫೦ ವರ್ಷದ ಕೃಷ್ಣಮೂರ್ತಿ ಅವರು ಆಟಂಬಾಂಬ್ ಸಿಡಿಸುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ, ಇದಲ್ಲದೆ ಎಲೆಕ್ಟ್ರಾನಿಕ್ ಸಿಟಿಯ ಸಮತಾ (೧೫) ಭೂ ಚಕ್ರ ಹಚ್ಚುವಾಗ ಕಣ್ಣಿನ ಕೆಳಭಾಗದ ಚರ್ಮಕ್ಕೆ ಹಾನಿ ಮಾಡಿಕೊಂಡಿದ್ದು, ಆಕೆಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದರು.
ಚಾಮರಾಜ ಪೇಟೆಯ ಹೃದಯ್ (೭) ಪಟಾಕಿ ಹಚ್ಚುವಾಗ ಕಣ್ಣಿನ ರೆಪ್ಪೆಗೆ ಹಾನಿ ಮಾಡಿಕೊಂಡಿದ್ದಾನೆ. ಅಲ್ಲದೆ ರಾಮನಗರದ ದೈವಿತ್ ಅವನ ಕಣ್ಣಿಗೂ ಹಾನಿಯಾಗಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ೧೬ ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀಪಾವಳಿಯ ಮುನ್ನ ಹಾಗೂ ನಂತರದ ೨ ದಿನಗಳನ್ನು ಪಟಾಕಿಯಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನೂ ೨ ದಿನಗಳವರೆಗೆ ಕಣ್ಣಿಗೆ ಹಾನಿ ಮಾಡಿಕೊಂಡವರು ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಇಲ್ಲಿಯವರೆಗೆ ದಾಖಲಾದ ೧೬ ಮಂದಿಯ ಜತೆಗೆ ಇನ್ನೂ ಸೋಮವಾರದವರೆಗೆ ದಾಖಲಾಗಲಿದ್ದು, ಪಟಾಕಿಯಿಂದ ಹಾನಿಗೊಳಗಾದ ಸಂಪೂರ್ಣ ಚಿತ್ರಣ ಅಂದು ಲಭ್ಯವಾಗಲಿದೆ ಎಂದು ಹೇಳಿದರು.
ಕಳೆದ ವರ್ಷ ಕೋವಿಡ್ ನಡುವೆಯೂ ೨೩ ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡವರು ಚಿಕಿತ್ಸೆ ಪಡೆದಿದ್ದು, ಈ ವರ್ಷ ಆ ಸಂಖ್ಯೆಯೂ ಇನ್ನೂ ಹೆಚ್ಚಾಗಲಿದೆ. ಆಸ್ಪತ್ರೆಯಲ್ಲಿ ೧೦೦ ಹಾಸಿಗೆಗಳ ವಾರ್ಡ್ ಸಿದ್ಧಪಡಿಸಿದ್ದು, ಯಾರಿಗೂ ಚಿಕಿತ್ಸೆಯ ಕೊರತೆಯುಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು,