ದೀಪಾವಳಿ ಹಬ್ಬ: ಹಸಿರು ಪಟಾಕಿ ಸಿಡಿಸಲು ಸಮಯ ನಿಗದಿ

ಕಲಬುರಗಿ.ನ.11: ನವದೆಹಲಿಯ ಪ್ರಧಾನ ಹಸಿರು ನ್ಯಾಯ ಪೀಠದ ನಿರ್ದೇಶನ ಹಾಗೂ ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ 2020ನೇ ಸಾಲಿನ ದೀಪಾವಳಿ ಹಬ್ಬವನ್ನು ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸುವಂತೆ ಈ ಹಿಂದೆ ನೀಡಿದ ದಿ.06-11-2020ರ ಆದೇಶಕ್ಕೆ ಹೆಚ್ಚುವರಿಯಾಗಿ ಹಸಿರು ಪಟಾಕಿ ಸಿಡಿಸಲು ಸಮಯ ನಿಗದಿಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ದೀಪಾವಳಿ ಹಬ್ಬ ಆಚರಣೆ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಮಾರ್ಗಸೂಚಿಗಳು ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 30ರ ಮಧ್ಯರಾತ್ರಿ ವರಗೆ ಚಾಲ್ತಿಯಲ್ಲಿದ್ದು, ಹಸಿರು ಪಟಾಕಿಯನ್ನು ಹಚ್ಚುವ/ ಸಿಡಿಸುವ ಸಮಯವನ್ನು ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಸೀಮಿತಿಗೊಳಿಸಿ ಅವಕಾಶ ನೀಡಲಾಗಿದೆ.

ಪರವಾನಿಗೆ ಮುನ್ನ ಮುಚ್ಚಳಿಕೆ ಪತ್ರ ಸಲ್ಲಿಸಬೇಕು: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಮಾಡಲು ಮಾರಾಟಗಾರರರಿಗೆ ಪರವಾನಿಗೆ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವಾಗ ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರಗಳು ತಪ್ಪದೇ ಮಾರಾಟಗಾರರಿಂದ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವುದಾಗಿ ಹಾಗೂ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಸರ್ಕಾರವು ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತಾವು ಬದ್ಧರಾಗಿರುವುದಾಗಿ ಮುಚ್ಚಳಿಕೆ ಪತ್ರ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದಲ್ಲದೆ ಪರವಾನಿಗೆ ಇಲ್ಲದ ಪಟಾಕಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.