ದೀಪಾವಳಿ ಹಬ್ಬದ ಸಂಭ್ರಮ : ಹಣತೆ, ಆಕಾಶಬುಟ್ಟಿಗಳ ಖರೀದಿ ಜೋರು

ಕಲಬುರಗಿ, ನ.3: ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಭೀತಿ ನಿಯಂತ್ರಣಗೊಂಡಿದ್ದು, ರಾಜ್ಯ ಸರ್ಕಾರವು ಹಾಗೂ ಜಿಲ್ಲಾಡಳಿತವು ಸರಳವಾಗಿ ದೀಪಾವಳಿ ಆಚರಿಸಲು ನಿಯಮಗಳನ್ನು ಜಾರಿಗೊಳಿಸಿದೆ. ಆ ಹಿನ್ನೆಲೆಯಲ್ಲಿ ನಿಯಮಗಳಡಿಯೇ ದೀಪಾವಳಿಯನ್ನು ಆಚರಿಸಲು ಜಿಲ್ಲೆಯ ಜನರು ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.
ನಗರದ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನರು ಸೇರಿ ತಮಗೆ ಬೇಕಾದ ಹಣತೆಗಳನ್ನು, ಆಕಾಶಬುಟ್ಟಿಗಳನ್ನು ಹಾಗೂ ಹಸಿರು ಪಟಾಕಿಗಳನ್ನು ಖರೀದಿಸಿದರು.
ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕಳೆದ ಎರಡು ದೀಪಾವಳಿಗಳಲ್ಲಿಯೂ ಸಹ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಸಹ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ. ಹೀಗಾಗಿ ಹಸಿರು ಪಟಾಕಿಗಳಷ್ಟೇ ವಾಣಿಜ್ಯಕ ಮಳಿಗೆಗಳಲ್ಲಿ ಕಂಡು ಬಂದವು.
ಬಣ್ಣ, ಬಣ್ಣದ ವೈವಿಧ್ಯಮಯ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಕಣ್ಣು ಕುಕ್ಕಿಸುವಂತೆ ಇದ್ದು, ಆಕರ್ಷಕ ಆಕಾಶ ಬುಟ್ಟಿಗಳನ್ನು ಕೆಲವರು ಈಗಾಗಲೇ ತಮ್ಮ ಮನೆಗಳ ಮುಂದೆ ನೇತು ಹಾಕಿ ದೀಪಾವಳಿ ಹಬ್ಬದ ಸಂಭ್ರಮವನ್ನು ಸವಿಯಲಾರಂಭಿಸಿದ್ದಾರೆ.