ದೀಪಾವಳಿ ಹಬ್ಬಕ್ಕೆ ಸೀರೆ ಖರೀದಿಗೆ ಹೋದಾಗ 14.5 ಗ್ರಾಂ.ಚಿನ್ನಾಭರಣ ಮಂಗಮಾಯ !

ಕಲಬುರಗಿ,ಆ.9-ದೀಪಾವಳಿ ಹಬ್ಬಕ್ಕೆ ಸೀರೆ ಖರೀದಿಗೆಂದು ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಸೀರೆ ಅಂಗಡಿಗೆ ಹೋಗಿ ಸೀರೆ ಖರೀದಿಸಿ ಮರಳಿ ಬರುತ್ತಿದ್ದ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗಿನಲ್ಲಿದ್ದ 14.5 ಗ್ರಾಂ.ಚಿನ್ನಾಭರಣ ಮತ್ತು 20 ಸಾವಿರ ರೂ.ನಗದು ಕಳವಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರೀಟಾ ಅಪ್ಪು ಚವ್ಹಾಣ್ ಎಂಬುವವರೆ ಚಿನ್ನಾಭರಣ ಮತ್ತು ನಗದು ಹಣ ಕಳೆದುಕೊಂಡಿದ್ದಾರೆ.
ವಿಜಯಪುರದ ಗೇವರಚಂದ ಕಾಲೋನಿಯವರಾದ ರೀಟಾ ಚವ್ಹಾಣ್ ಅವರು ದೀಪಾವಳಿ ಹಬ್ಬಕ್ಕೆಂದು ಕಲಬುರಗಿ ನಗರದ ಸರಸ್ವತಿ ಪುರದಲ್ಲಿರುವ ತವರು ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಸೀರೆ ಖರೀದಿಸಲೆಂದು ಸಹೋದರಿ ಶಿಲ್ಪಾ ನಾಯಕ್ ಮತ್ತು ಪಕ್ಕದ ಮನೆಯವರಾದ ಶೋಭಾ ರಾಠೋಡ್ ಅವರೊಂದಿಗೆ ಸೂಪರ್ ಮಾರ್ಕೆಟ್‍ನ ಕಪಡಾ ಬಜಾರದ ಪುಟಾಣಿಗಲ್ಲಿಯಲ್ಲಿರವ ಸೀರೆ ಅಂಗಡಿಗೆ ಹೋಗಿ ಸೀರೆ ಖರೀದಿಸಿ ಕಪಡಾ ಬಜಾರದ ಮುಖ್ಯರಸ್ತೆ ಕಡೆಗೆ ಹೋಗುವಾಗ ತಾಯಿಗೆ ಫೋನ್ ಮಾಡಲೆಂದು ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ಮೊಬೈಲ್ ತೆಗೆದುಕೊಳ್ಳಲು ಹೋದಾಗ ವ್ಯಾನಿಟಿ ಬ್ಯಾಗಿನ ಒಂದು ಸೈಡ್ ಕತ್ತರಿಸಿದ್ದು ಅವರ ಗಮನಕ್ಕೆ ಬಂದಿದೆ. ಬ್ಯಾಗಿನಲ್ಲಿದ್ದ 60 ಸಾವಿರ ರೂ.ಮೌಲ್ಯದ ತಲಾ 5 ಗ್ರಾಂ.ನ 2 ಸುತ್ತುಂಗುರ, 7,500 ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯೋಲೆ, 4 ಸಾವರ ರೂ.ಮೌಲ್ಯದ 1.5 ಗ್ರಾಂ.ನ ಬಂಗಾರದ ಮೂಗಿನ ನತ್ತು, 20 ಸಾವಿರ ರೂ.ನಗದು ಕಳವಾಗಿದ್ದು, ಅವರು ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.