ದೀಪಾವಳಿ ಸಂಭ್ರಮದ ಆಚರಣೆಗೆ ಕೊರೋನಾ ಭೀತಿ: ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಸ್ಥರು

ಕಲಬುರಗಿ:ನ.15: ಎಲ್ಲೆಡೆ ದೀಪಗಳ ಹಬ್ಬದ ಸಂಭ್ರಮ ಮನೆಮಾಡಿದೆ. ಆದಾಗ್ಯೂ, ಕೋವಿಡ್-19 ಕಾರಣ ಸರಳ ದೀಪಾವಳಿ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.
ಹೌದು, ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ವೈಭವ ಜಿಲ್ಲೆಯಲ್ಲಿ ಕಂಡುಬರುತ್ತಿಲ್ಲ. ಹಬ್ಬದಂದು ಪೂಜೆಗೆ ಬೇಕಾಗುವ ಹೂವು, ಹಣ್ಣು, ಬಾಳೆದಿಂಡು, ಕಬ್ಬು, ಕುಂಬಳಕಾಯಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿ ವರ್ಷ ದೀಪಾವಳಿ ಬಂತೆಂದರೆ ಬಾಳೆದಿಂಡು, ಹಣ್ಣು, ಹೂವು ಸೇರಿದಂತೆ ಅಗತ್ಯ ಸಾಮಗ್ರಿಗಳ ವ್ಯಾಪಾರ ಜೋರಾಗಿರುತ್ತಿತ್ತು. ಆದಾಗ್ಯೂ, ಈ ಬಾರಿ ವ್ಯಾಪಾರದ ಮೇಲೆ ಕರಿನೆರಳು ಬಿದ್ದಿದೆ. ಆದಾಗ್ಯೂ, ಹಣತೆ ವ್ಯಾಪಾರಕ್ಕೆ ಯಾವುದೇ ರಈತಿಯ ಪರಿಣಾಮ ಬೀರಿಲ್ಲ. ಸರ್ಕಾರ ದೀಪ ಬೆಳಗಿಸಿ, ಹಸಿರು ಪಟಾಕಿ ಸಿಡಿಡುವ ಮೂಲಕ ಹಬ್ಬವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವಂತೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಜನರು ಮನೆಯಿಂದ ಹೊರಬರದೇ ಮನೆಯಲ್ಲಿಯೇ ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿರುವುದು ಕಂಡುಬಂತು.
ಹಣತೆ ಖರೀದಿಗೆ ಜನರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಮಾರುಕಟ್ಟೆಗೆ ಆಗಮಿಸಿ ಗಣೇಶ, ಕಂದೀಲು, ತುಳಸಿ, ಕಾರಂಜಾ ಹೀಗೆ ಹಲವು ಆಕರ್ಷಕ ಹಣತೆಗಳನ್ನು ಮನೆಯ ದೀಪಾಲಂಕಾರಕ್ಕೆ ಖರೀದಿಸಿದರು. ರಾಜಸ್ತಾನ್, ಗುಜರಾತ್ ಸೇರಿದಂತೆ ನೆರೆ ರಾಜ್ಯಗಳಿಂದ ಹಣತೆಗಳನ್ನು ತಂದು ಮಾರಾಟಕ್ಕೆ ಇಡಲಾಗಿದೆ.
ಹಸಿರು ಪಟಾಕಿಗೆ ಮಾತ್ರ ಪರವಾನಿಗೆ ಕೊಟ್ಟರೂ ಸಹ ಅಲ್ಲಲ್ಲಿ ಕೆಂಪು ಪಟಾಕಿಗಳ ಸದ್ದು ಕೇಳಿಬರುತ್ತಿದೆ. ಆದಾಗ್ಯೂ, ಜನರು ಹಸಿರು ಪಟಾಕಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದ್ದು ಎಲ್ಲೆಡೆ ಕಂಡುಬರುತ್ತಿದೆ.