ದೀಪಾವಳಿ ವೇಳೆಗೆ ಸಂಪುಟ ವಿಸ್ತರಣೆ

ಬೆಂಗಳೂರು, ನ. ೬- ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ದೀಪಾವಳಿ ವೇಳೆಗೆ ಆಗುವ ಸಾಧ್ಯತೆಗಳಿದ್ದು, ಸಚಿವಾಕಾಂಕ್ಷಿ ಶಾಸಕರಿಗೆ ದೀಪಾವಳಿ ಹೊತ್ತಿಗೆ ಅದೃಷ್ಟ ಕುಲಾಹಿಸಲಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಪಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ರಾಷ್ಟ್ರೀಯ ಅಧ್ಯಕ್ಷರು ಉಪಚುನಾಣೆಯ ಫಲಿತಾಂಶದ ನಂತರ ದೆಹಲಿಗೆ ಬನ್ನಿ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ಹಾಗಾಗಿ ಈ ತಿಂಗಳ ೧೦ರ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ.
ಸಂಪುಟ ವಿಸ್ತರಣೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ದೀಪಾವಳಿಗೆ ಮುನ್ನವೇ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಬಿಜೆಪಿ ಉನ್ನತ ಮೂಲಗಳು ಹೇಳಿವೆ.
ಈ ತಿಂಗಳ ೧೧ ಇಲ್ಲವೆ ೧೨ ರಂದು ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯಲಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ದೀಪಾವಳಿ ವೇಳೆಗೆ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತ ಎಂದು ಹೇಳಲಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು, ಈ ಪೈಕಿ ೪-೫ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ದೇಶಿಸಿದ್ದಾರೆ.
ವಿಧಾನಪರಿಷತ್‌ನ ಸದಸ್ಯರಾದ ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್ ಇವರಿಗೆ ಸಚಿವ ಸ್ಥಾನ ಸಿಗುವುದು ನಿಶ್ಚಿತವಾಗಿದ್ದು, ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆದ್ದರೆ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಇದರ ಜತೆಗೆ ಬಿಜೆಪಿಯ ಹಿರಿಯ ಶಾಸಕರಾದ ಉಮೇಶ್‌ಕತ್ತಿ ಇಲ್ಲವೆ ಮುರುಗೇಶ್ ನಿರಾಣಿ ಹಾಗೂ ಅರವಿಂದ ಲಿಂಬಾವಳಿ ಇವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಇವೆ.
ಸಚಿವರಾಗಲು ಬಿಜೆಪಿಯಲ್ಲಿ ಪೈಪೋಟಿಯೇ ಇದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಅಸಮಾಧಾನ, ಅತೃಪ್ತಿಗೆ ಅವಕಾಶವಾಗದಂತೆ ಸಂಪುಟ ವಿಸ್ತರಿಸುವ ಸವಾಲು ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದಿದೆ.