ದೀಪಾವಳಿ ಲಕ್ಷ್ಮೀಪೂಜೆಗೆ ಭರ್ಜರಿ ಖರೀದಿ

ಕಲಬುರಗಿ ನ 4: ದೀಪಾವಳಿ ಹಬ್ಬದ ಸಂದರ್ಭದ ಲಕ್ಷ್ಮೀದೇವಿಯ ವಿಶೇಷ ಪೂಜೆಗಾಗಿ ನಗರದ ಮಾರುಕಟ್ಟೆಗಳಲ್ಲಿ ಹೂಹಣ್ಣು, ಕಬ್ಬು ಬಾಳೆದಿಂಡು,ಕುಂಬಳಕಾಯಿ ಮೊದಲಾದ ಸಾಮಗ್ರಿ ವಹಿವಾಟು ಜೋರಾಗಿ ನಡೆಯುತ್ತಿದೆ.
ದೀಪಾವಳಿಯಲ್ಲಿ ಲಕ್ಷ್ಮೀದೇವಿ ಪೂಜೆ ಒಂದು ಪ್ರಧಾನ ಆಚರಣೆಯಾಗಿದ್ದು, ಪೂಜೆಗೆ ಬೇಕಾಗುವ ಸಾಮಗ್ರಿಗಳಿಗೆ ಈ ಸಂದರ್ಭದಲ್ಲಿ ಎಲ್ಲಿಲ್ಲದ ಬೇಡಿಕೆ.
ದೀಪಾವಳಿ ಸಂದರ್ಭದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ವಹಿವಾಟು ವರ್ಧಿಸಲೆಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಪೂಜೆ ಸಲ್ಲಿಸುವದು ಸಂಪ್ರದಾಯ.ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮತ್ತು ನಾಳೆ ನಡೆಯುವ ಪೂಜೆಗಾಗಿ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ನೂಕು ನುಗ್ಗಲು ಉಂಟಾಯಿತು.ಗ್ರಾಹಕರಿಂದ ಬೇಡಿಕೆ ಹೆಚ್ಚಾದಂತೆ ವಸ್ತುಗಳ ಬೆಲೆ ಸಹ ಆಕಾಶಕ್ಕೆ ಏರಿವೆ.
ನಗರದ ಸುಪರ್ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ ಹತ್ತಿರದ ಕಣ್ಣಿ ಮಾರುಕಟ್ಟೆ,ರಾಮಮಂದಿರ ಹತ್ತಿರದ ಬಯಲು ಮಾರುಕಟ್ಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಬಾಳೆಹಣ್ಣು, ಸೇಬು,ಸೀತಾಫಲ, ವೀಳ್ಯದೆಲೆ,ಚೆಂಡುಹೂ, ಹೂವಿನ ಮಾಲೆ,ಬಾಳೆದಿಂಡು,ತೆಂಗಿನಕಾಯಿ ಮೊದಲಾದ ವಸ್ತುಗಳ ಖರೀದಿ ಹೆಚ್ಚಾಗಿತ್ತು.