ದೀಪಾವಳಿ ಪ್ರಯುಕ್ತ ಬಿಜೆಪಿ ಹಿರಿಯ ಕಾರ್ಯಕರ್ತರ ಸಭೆ: ಹಿರಿಯರ ಪರಿಶ್ರಮದಿಂದ ಬೆಳೆದ ಬಿಜೆಪಿ

ಪುತ್ತೂರು, ನ.೧೭- ಹಿರಿಯ ಕಾರ್ಯಕರ್ತ ಪರಿಶ್ರಮ, ವಿಶ್ವಾಸದಿಂದ ಪ್ರಸ್ತುತ ಅಗಾಧವಾಗಿ ಬೆಳೆದು ಬಂದಿರುವ ಬಿಜೆಪಿ ಪಕ್ಷವನ್ನು ಇಂದು ಜಗತ್ತು ನೋಡುವಂತಾಗಿದೆ. ಇದನ್ನು ನೋಡುವ ಭಾಗ್ಯ ನಮ್ಮದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಭಾನುವಾರ ತೆಂಕಿಲ ಗೌಡ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ದೀಪಾವಳಿ ಪ್ರಯುಕ್ತ ಹಿರಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಭಾರತಮಾತೆಯನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಗುರಿಯಾಗಿದೆ. ಇದನ್ನು ಹಿರಿಯರು ಹಿಂದೆ ಜನಸಂಘ ಕಾಲದಲ್ಲಿ ಹಾಕಿಕೊಟ್ಟ ಮಾರ್ಗದರ್ಶನ, ಶ್ರಮದ ಫಲದ ಆಧಾರದಲ್ಲಿ ಸಾಕಾರಗೊಳಿಸಲು ಸಾಧ್ಯ ಎಂದ ಅವರು, ಪಕ್ಷವನ್ನು ಇಂದು ಅಗಾಧವಾಗಿ ಕಟ್ಟಲು ಹಿರಿಯರು ಮಾಡಿದ್ದು ಕೆಲಸ ಅಲ್ಲ. ಬದಲಾಗಿ ತಪಸ್ಸು ಎಂದರು. ಈ ಸಂದರ್ಭದಲ್ಲಿ ಹಿಂದೆ ಪಕ್ಷವನ್ನು ಕಟ್ಟುವಲ್ಲಿ ಪಟ್ಟ ಪರಿಶ್ರಮವನ್ನು ಮೆಲುಕು ಹಾಕಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುವ ಪೀಳಿಗೆ ಪ್ರವಾಹದ ರೂಪದಲ್ಲಿ ಬಂದಾಗ ಹಿರಿಯರು ಮೂಲೆ ಗುಂಪಾಗುವುದು ಸಹಜ. ಹಿರಿಯ ಕಾರ್ಯಕರ್ತರು ಸಂಘಟನೆಗಾಗಿ ಹೇಗೆ ಸಮಯ ಕಳೆದಿದ್ದಾರೆ, ಇಂದು ನಾವು ಪಕ್ಷದಲ್ಲಿ ಉನ್ನತ ಜವಾಬ್ದಾರಿ ಪಡೆದು ಸುಖಾನುಭವ ಪಡೆಯುತ್ತಿರುವುದನ್ನು ಯುವ ಪೀಳಿಗೆ ಮರೆಯಬಾರದು. ಹಿರಿಯರ ಮಾರ್ಗದರ್ಶನದಿಂದ ಇಂದು ಸಾಮಾನ್ಯ ಕಾರ್ಯಕರ್ತನೂ ದೇಶದ ನಾಯಕತ್ವ ಪಡೆಯುವಂತಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತೀ ಗಾಮ ಗ್ರಾಮಗಳಲ್ಲೂ ಹಿರಿಯ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಹಿರಿಯ ಕಾರ್ಯಕರ್ತರನ್ನು ಶಾಸಕ ಸಂಜೀವ ಮಠಂದೂರು ಹಾಗೂ ಪ್ರತಾಪಸಿಂಹ ನಾಯಕ್ ಪಕ್ಷದ ಶಾಲು ಹೊದಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು. ಹಿರಿಯ ಕಾರ್ಯಕರ್ತರ ಪರವಾಗಿ ಸುಧಾಕರ ಸುವರ್ಣ, ಬಾಲಕೃಷ್ಣ ರೈ ಮುಗೆರೋಡಿ, ಸೇಡಿಯಾಪು ಜನಾರ್ದನ ಭಟ್, ಸದಾಶಿವ ಭಂಡಾರಿ, ಚೆನ್ನಪ್ಪ ರೈ ಜನಸಂಘದ ಕಾಲದಿಂದ ಪಕ್ಷವನ್ನು ಕಟ್ಟಿದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.