ದೀಪಾವಳಿ: ಪಟಾಕಿ ಮಾರಾಟಗಾರರಿಗೆ ಬೋನಸ್ ಲಾಸ್

ರಾಯಚೂರು.ನ.14-ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬವನ್ನು ಜಿಲ್ಲೆಯಲ್ಲಿ ಪ್ರತಿವರ್ಷವೂ ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಹಲವು ಮುಂಜಾಗೃತ ಕ್ರಮಗಳನ್ನು ಜಾರಿಗೊಳಿಸಿದ್ದು, ಪಟಾಕಿಗಳನ್ನು ಸಹ ನಿಷೇಧಿಸಿದೆ. ಇದರಿಂದ ಈಗಾಗಲೇ ಕೊರೋನಾ ನಷ್ಟದಲ್ಲಿರುವ ಪಟಾಕಿ‌ ಮಾರಾಟಗಾರರಿಗೆ ದೀಪಾವಳಿ ಹಬ್ಬದ ಬೋನಸ್ ಲಾಸ್ ನೀಡಿದಂತಾಗಿದೆ.
ದೀಪಾವಳಿ ಹಬ್ಬದಂದು ವಿಶೇಷವಾಗಿ ಪಟಾಕಿ ಸಿಡಿಸಿ ಆಚರಿಸುವುದು ಹಲವು ವರ್ಷಗಳಿಂದ ನಡೆದು ಬಂದಿದ್ದು, ಕೊರೋನಾ ಹಿನ್ನೆಲೆಯಲ್ಲಿ ಪಟಾಕಿ ನಿಷೇದಿಸಿದೆ.
ಪ್ರತಿವರ್ಷವು ನಗರದ ಮಹಾತ್ಮಗಾಂಧಿ ಪುತ್ಥಳಿ ಹಿಂದಿರುವ ಕ್ರೀಡಾಂಗಣದಲ್ಲಿ ಸುಮಾರು 25ರಿಂದ 30 ಪಟಾಕಿ ಮಾರಾಟ ಮಳಿಗೆಗಳನ್ನು ಜಿಲ್ಲಾಡಳಿತ ಮತ್ತು ನಗರಸಭೆ ಪರವಾನಿಗೆ ಪಡೆದು ಆರಂಭಿಸಲಾಗುತ್ತಿತ್ತು. ದೀಪಾವಳಿ ಹಬ್ಬಕ್ಕೆ ನಗರದ ಹಲವು ಕಚೇರಿ, ಅಂಗಡಿ, ಮಳಿಗೆಗಳ ಪೂಜೆ ಕಾರ್ಯ ನಡೆಯುತ್ತಿದ್ದವು. ಹಬ್ಬ ವಿಶೇಷವಾಗಿ ದೀಪಗಳಿಂದ ಮನೆ ಅಲಂಕರಿಸಿ ಪಟಾಕಿ ಸಿಡಿಸಿ ಆಚರಿಸಲಾಗುತ್ತಿದ್ದು, ಪಟಾಕಿಗಳನ್ನು ಸರ್ಕಾರ ನಿಷೇಧಿಸಿದ್ದರಿಂದ ಈ ವರ್ಷ ಯಾವುದೇ ಪಟಾಕಿ ಮಾರಾಟ ಮಳಿಗೆಗಳು ತೆರೆದಿಲ್ಲ.
ಪ್ರತಿಯೊಂದು ಮಳಿಗೆಯಲ್ಲಿ 4ರಿಂದ 5 ಲಕ್ಷ ಪಟಾಕಿ ಗಳನ್ನು ತರಿಸಲಾಗುತ್ತಿದ್ದು, ಪ್ರತಿಯೊಬ್ಬ ವ್ಯಾಪಾರಿಯು ಸುಮಾರು 1 ಲಕ್ಷದವರೆಗೆ ಲಾಭಗಳಿಸುತ್ತಿದ್ದು, ವ್ಯಾಪಾರಿಗಳು ನಷ್ಟದಲ್ಲೆ ಈ ವರ್ಷ ಕಳೆಯುವಂತಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ವ್ಯಾಪಾರ ಸ್ಥಗಿತಗೊಂಡಿದ್ದು ತುಂಬಾ ನಷ್ಟ ಅನುಭವಿಸುವಂತಾಗಿದೆ. ಆದರೆ ದೀಪಾವಳಿಯಲ್ಲಿ ಚೇತರಿಸಿಕೊಳ್ಳುವ ಆಸೆಯಿತ್ತು‌. ಸರ್ಕಾರದ ನಿಷೇಧದ ಆಜ್ಞೆ ಯಿಂದ ಯಾವುದೇ ಮಳಿಗೆಗಳನ್ನು ತೆರೆದಿಲ್ಲ. ಇದು ಪಟಾಕಿ ಮಾರಾಟಗಾರರಿಗೆ ದೀಪಾವಳಿ ಹಬ್ಬದ ಬೋನಸ್ ಲಾಸ್ ಆದಂತಿದೆ ಎಂದು ಪಟಾಕಿ ವ್ಯಾಪಾರಿ ಆನಂದ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.