ದೀಪಾವಳಿ ಪಟಾಕಿ ನಿಷೇಧ

ಬೆಂಗಳೂರು, ನ. ೬- ಬೆಳಕಿನ ಹಬ್ಬ ದೀಪಾವಳಿಯಲ್ಲಿ ಈ ಬಾರಿ ಪಟಾಕಿಯ ಸದ್ದು ಇರುವುದಿಲ್ಲ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಈ ಸಂಬಂಧ ಶೀಘ್ರವೇ ಆದೇಶ ಹೊರಡಿಸುವುದಾಗಿ ಅವರು ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿಂದು ರಾಜ್ಯದ ಸರ್ಕಾರಿ ಐಟಿಐಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಟಿಸಿಎಸ್ ಜತೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗುವುದು ಎಂದು ಹೇಳಿದರು.

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿ ಕೊರೊನಾ ಸೋಂಕು ಹೆಚ್ಚಳವಾಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಸರ್ಕಾರದ ಈ ತೀರ್ಮಾನದಿಂದ ದೀಪಾವಳಿಯಲ್ಲಿ ಯಾರೂ ಪಟಾಕಿಯನ್ನು ಮಾರುವಂತೆಯೂ ಇಲ್ಲ, ಹೊಡೆಯುವಂತೆಯೂ ಇಲ್ಲ. ಈ ಬಾರಿಯ ದೀಪಾವಳಿ ಪಟಾಕಿ ಸದ್ದಿಲ್ಲದೆ ಆಚರಿಸುವಂತಾಗಿದೆ.
ಸಾಮಾನ್ಯವಾಗಿ ದೀಪಾವಳಿಯಲ್ಲಿ ಪಟಾಕಿಯ ಸದ್ದೇ ಹೆಚ್ಚು. ಪೈಪೋಟಿಗೆ ಬಿದ್ದವರಂತೆ ತರಾವರಿ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಸರ್ಕಾರದಈ ಆದೇಶದಿಂದ ಪಟಾಕಿ ಪ್ರಿಯರಿಗೆ ನಿರಾಸೆಯಾದಂತಾಗಿದೆ.
ಶೀಘ್ರವೇ ಕಾನೂನು
ರಾಜ್ಯದಲ್ಲಿ ಮದುವೆಗಾಗಿ ಮತಾಂತರ ಆಗುವುದನ್ನು ತಡೆಯಲು ಶೀಘ್ರವೇ ಕಾನೂನನ್ನು ರೂಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೇಳಿದರು.
ಲವ್ ಜಿಹಾದ್‌ಗೆ ತಡೆ ಹಾಕಬೇಕಾಗಿದೆ. ಹಾಗಾಗಿ ಲವ್ ಜಿಹಾದ್ ನಿಷೇಧಿಸಿ ಮದುವೆಗಾಗಿ ಆಗುವ ಮತಾಂತರಗಳನ್ನು ತಡೆಯುವ ಸಂಬಂಧ ಯಾವ ರೀತಿ ಕಾನೂನುಗಳನ್ನು ರೂಪಿಸಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಆದಷ್ಟು ಶೀಘ್ರ ಮತಾಂತರ ತಡೆಯುವ ಕಾನೂನನ್ನು ಜಾರಿ ಮಾಡುತ್ತೇವೆ ಎಂದು ಅವರು ಹೇಳಿದರು.
೧೧ ರಂದು ದೆಹಲಿಗೆ
ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರೊಡನೆ ಚರ್ಚಿಸಲು ಈ ತಿಂಗಳ ೧೧ ರಂದು ದೆಹಲಿಗೆ ತೆರಳುತ್ತಿದ್ದೇನೆ. ಉಪಚುನಾವಣಾ ಫಲಿತಾಂಶ ಬಂದ ತಕ್ಷಣ ದೆಹಲಿಗೆ ತೆರಳುವುದಾಗಿ ಅವರು ಹೇಳಿದರು.
ಸಂಪುಟ ವಿಸ್ತರಣೆ ಸಂಬಂಧ ದೂರವಾಣಿ ಮೂಲಕವೇ ವರಿಷ್ಠರ ಜತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಇಲ್ಲವೆ ವರಿಷ್ಠರು ಬುಲಾವ್ ನೀಡಿದರೆ ಈ ತಿಂಗಳ ೧೧ ರಂದು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಿ ಮಹೋರ್ತ ನಿಗದಿ ಮಾಡುವುದಾಗಿ ಅವರು ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ನೂರಾರು ಬಾರಿ ಲೆಕ್ಕಾಚಾರ ಹಾಕಿಯೇ ನಾನು ಈ ಮಾತು ಹೇಳುತ್ತಿದ್ದೇನೆ. ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ ಎಂದರು.
ಸಿರಾದ ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಈಗಾಗಲೇ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಕೆರೆ ಮತ್ತು ಕಾಲುವೆಗಳನ್ನು ಸ್ವಚ್ಛಗೊಳಿಸಿ ಇನ್ನು ೩ ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸಲಾಗುವುದು ಎಂದು ಅವರು ಹೇಳಿದರು.