ದೀಪಾವಳಿ ದೇವಾಲಯಗಳಲ್ಲಿ ವಿಶೇಷ ಪೂಜೆ

ಗೌರಿಬಿದನೂರು : ದೀಪಾವಳಿ ಹಬ್ಬದ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿ.ಪಂ ಸದಸ್ಯ ಕೆ.ಕೆಂಪರಾಜು ಭೇಟಿ ನೀಡಿ ಜನತೆಗೆ ಹಬ್ಬದ ಉಡುಗೊರೆ ಹಾಗೂ ಸಿಹಿಯನ್ನು ವಿತರಿಸಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಗೆ ಕೊರೋನಾ ಮಹಾಮಾರಿಯು ಕಪ್ಪುಚುಕ್ಕೆಯಂತಿದೆ, ಇದರಿಂದ ಜನತೆಯಲ್ಲಿ ಹಬ್ಬದ ಆಚರಣೆಯ ಸಂಭ್ರಮ ಮಡುಗಟ್ಟಿದೆ. ಸಂಕಷ್ಟದಲ್ಲಿರುವ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ೩ ಹಂತವಾಗಿ ನೆರವು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಆರ್ಥಿಕ ಸಹಕಾರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೆರವಿನ ಅಗತ್ಯವಿರುವ ಪ್ರತೀ ಮನೆಗೆ ಭೇಟಿ ಮಾಡಿ ಸ್ಪಂಧಿಸಲಾಗುವುದು ಎಂದರು.
ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳು ಸ್ಥಳೀಯ ಜನರ ನಡುವೆ ನಂಭಿಕೆ ಮತ್ತು ವಿಶ್ವಾಸವನ್ನು ಬೆಳೆಸುತ್ತವೆ. ಜತೆಗೆ ಪ್ರತಿಯೊಬ್ಬರಲ್ಲಿ ಸೋದರತ್ವ ಭಾವನೆ ಮೂಡಿಸಿ ಶಾಂತಿ, ಸೌಹಾರ್ಧತೆ ಹಾಗೂ ಸಾಮರಸ್ಯವನ್ನು ಮೂಡಿಸುತ್ತವೆ. ಆದ್ದರಿಂದ ಜನತೆ ಸಂಕಷ್ಟದ ನಡುವೆಯೂ ಸರಳವಾಗಿ ದೇಶೀ ಸಂಸ್ಕೃತಿಗೆ ಪೂರಕವಾಗಿ ನಾಗರೀಕತೆಯನ್ನು ಬಿಂಭಿಸುವಂತೆ ಹಬ್ಬದ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ಇದರಿಂದಲೇ ದೇಶದ ಪಾವಿತ್ರತೆ ಉಳಿಯಲು ಸಾಧ್ಯವಾಗುತ್ತದೆ. ಎಲ್ಲರೂ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಸುಡದೆ ಮಣ್ಣಿನ ದೀಪಗಳನ್ನು ಹಚ್ಚಿ ಉಜ್ವಲವಾದ ಬೆಳಕನ್ನು ಚೆಲ್ಲಿ ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ವೇದಲವೇಣಿ ರಾಮು, ಮುದುಗೆರೆ ರಾಜಶೇಖರ್, ಸತೀಶ್, ಗಂಗಾಧರಪ್ಪ, ಎಚ್.ಎಲ್.ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.