ದೀಪಾವಳಿ ಆಚರಣೆಗೆ ಭತ್ತನಾಡು ಸಜ್ಜು ಮುಖ್ಯಾಂಶಗಳು

• ಪೂಜೆ ಸಾಮಾಗ್ರಿಗಳ ಬೆಲೆ ಏರಿಕೆ
• ಅಂಗಡಿ ಮುಂಗಟ್ಟುಗಳಲ್ಲಿ ಜನಜಗುಂಳಿ
• ಪರಿಸರ ಸ್ನೇಹಿ ಪಟಾಕಿ ಹಚ್ಚಿ ದೀಪಾವಳಿ ಆಚರಿಸೋಣ

ವಿಶೇಷ ವರದಿ
ದಸ್ತಗೀರ್ ಗುಡಿಹಾಳ


ಗಂಗಾವತಿ ನ 14 : ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಭತ್ತನಾಡು ಸಜ್ಜಾಗಿದೆ.
ವಿವಿಧ ಅಲಂಕಾರಿಕ ದೀಪಗಳು, ಮಣ್ಣಿನ ದೀಪಗಳು, ಪರಿಸರ ಸ್ನೇಹಿ ಪಟಾಕಿಗಳು ಹಾಗೂ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಕೋವಿಡ್-19 ಆತಂಕ ಹಾಗೂ ಬೆಲೆ ಏರಿಕೆ ನಡೆವೆಯೂ ಹಬ್ಬದ ಖರೀದಿ ಜೋರಾಗಿದೆ.
ನಗರದ ಬಟ್ಟೆ ಅಂಗಡಿ, ಬೆಳ್ಳಿ ಆಭರಣ ಸೇರಿ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಜಗುಂಳಿ ಕಂಡು ಬರುತ್ತಿದೆ. ಅಲ್ಲದೇ, ಕೆಲ ಮಾಲೀಕರು ಶ್ಯಾಂಪ್ ಗಳನ್ನು ವಿಶೇಷ ಅಲಂಕಾರ ಮಾಡಿದ್ದು, ಗ್ರಾಹಕರನ್ನು ಆಕರ್ಷಿಸಲು ಬಹುಮಾನ, ಸಾಲ ಮೇಳ ಸೌಲಭ್ಯ ನೀಡುತ್ತಿವೆ.
ಸಾರ್ವಜನಿಕರು ಶನಿವಾರ ಬೆಳಗ್ಗೆಯಿಂದ ಹಬ್ಬಕ್ಕೆ ಅವಶ್ಯವಿರುವ ಪೂಜೆ ಸಾಮಾಗ್ರಿ, ದಿನಸಿ ವಸ್ತಗಳು, ಹಣ್ಣು, ಬಾಳೆದಿಂಡು ಸೇರಿ ವಿವಿಧ ಸಾಮಾಗ್ರಿಗಳು ಖರೀದಿಯಲ್ಲಿ ತಲ್ಲೀನರಾಗಿದ್ದು, ಖರೀದಿ ಜೋರಾಗಿ ನಡೆದಿತ್ತು.
ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿ ಚೌಕ್, ಮಹಾವೀರ ಸರ್ಕಲ್, ಸಂತೆಬಯಲು, ಇಸ್ಲಾಂಪೂರ, ಕೊಪ್ಪಳ ರಸ್ತೆ ಸೇರಿದಂತೆ ಸುತ್ತಮುತ್ತಲ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಮುಗಿಬಿದ್ದಿದ್ದರು.
ಅಲ್ಲದೇ, ನಾನಾ ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಕೆಲಕಡೆ ಬ್ಯಾರೆಕೋಡ್ ಹಾಕಲಾಗಿದೆ. ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು.

ಪಟಾಕಿ ಮಳಿಗೆ ಆರಂಭ
ಗಂಗಾವತಿ ನಗರ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಹೊರತಾಗಿ ಬೇರೆ ಯಾವುದೇ ರೀತಿಯ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಹಾಗೂ ಸಿಡಿಸುವುದನ್ನು ನಗರಸಭೆ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೇ, ಪರಿಸರ ಸ್ನೇಹಿ ಪಟಾಕಿ ಹಂಚುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ. ನಗರದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಪಟಾಕಿ ಮಳಿಗೆಗಳನ್ನು ಆರಂಭಿಸಲಾಗಿದೆ. ಪಟಾಕಿ ಮಾರಾಟಕ್ಕೆ ಸಿದ್ದತೆ ನಡೆದಿದೆ.
ಬೆಲೆ ಏರಿಕೆ: ದೀಪಾವಳಿ ಹಬ್ಬದ ಪೂಜೆಗೆ ಅವಶ್ಯವಿರುವ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಚೆಂಡು ಹೂವು (ಕೆ.ಜಿ. 200), ಮಲ್ಲಿಗೆ (1000 ಕೆ.ಜಿ.), ಬಾಳೆಗೋನೆ (250 ರೂ.),ಸೀತಾಫಲ (80 ಕೆ.ಜಿ.), ಬಾಳೆದಿಂಡು 150 ( ಒಂದು ಜೊತೆ), ಕುಂಬಳಿಕಾಯಿ (100ರಿಂದ 150) ದರವಿದೆ.

ಆಕಾಶ ಬುಟ್ಟಿ ಆಕರ್ಷಣೆ
ನಾನಾ ವಿನ್ಯಾಸದ ಆಕಾಶ ಬುಟ್ಟಿಗಳು ಗ್ರಾಹಕರ ಮನ ಸೆಳೆಯುತ್ತಿವೆ. ಹಸಿರು, ಕೆಂಪು, ನೀಲಿ, ಬಳಿ, ಹಳದಿ ಸೇರಿ ವಿವಿಧ ಬಣ್ಣಗಳ ಆಕಾಶ ಬುಟ್ಟಿಗಳು ಜನರನ್ನು ಕೈ ಬಿಸಿ ಕರೆಯುತ್ತಿವೆ. ಗಾತ್ರದ ಆಧಾರದ ಮೇಲೆ ಧರವಿದ್ದು, 1 ಆಕಾಶ ಬುಟ್ಟಿಗೆ 100ರಿಂದ 200 ಬೆಲೆ ಇದೆ.
ಬಗೆ ಬಗೆಯ ದೀಪಗಳು: ಬಗೆ ಬಗೆಯ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಮಣ್ಣು, ಪಿಂಗಾಣಿ ದೀಪಗಳು ಮಾರಾಟ ಮಾಡಲಾಗುತ್ತಿದೆ. 1 ಜೊತೆ ಮಣ್ಣಿನ ದೀಪಕ್ಕೆ 50 ದರವಿದೆ. ಚೌಕಾಸಿ ಮೇಲೆ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ವ್ಯಾಪಾರಿ ದೇವಮ್ಮ.


ಸರ್ಕಾರ ಹಸಿರು ಪಟಾಕಿಗೆ ಅವಕಾಶ ನೀಡಿದೆ. ಇದರಿಂದ ಅಲ್ಪಮಟ್ಟಿಗೆ ಮಾಲೀನ್ಯ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಸಹ ಪರಿಸರ ಸ್ನೇಹಿ ಪಟಾಕಿ ಹಚ್ಚುವಂತೆ ಸಾರ್ವಜನಕರಲ್ಲಿ ಮನವಿ ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ರಾಸಾಯನಿಕ ಮಿಶ್ರಿತ ಪಟಾಕಿ ಹಚ್ಚಿದರೆ ಪಟಾಕಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

  • ನೇತ್ರಾವತಿ, ಪರಿಸರ ಇಂಜಿನಿಯರ್, ನಗರಸಭೆ, ಗಂಗಾವತಿ