ದೀಪಾವಳಿ ಆಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸಿ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ

ಮಂಗಳೂರು, ನ.೧೧- ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ನಿರ್ದೇಶನದಂತೆ ಕಟ್ಟುನಿಟ್ಟಿನ ನಿಯಮಗಳನ್ನು  ಪಾಲಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ, ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರದಿಂದ ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಪರವಾನಿಗೆದಾರರು ಇಲಾಖೆ ಅಥವಾ ಪ್ರಾಧಿಕಾರದಿಂದ ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ತಾತ್ಕಾಲಿಕವಾಗಿ ಅಂಗಡಿಗಳನ್ನು ತೆರೆಯಬೇಕು.

ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ನಡೆಸುವಂತೆ ಸಂಬಂಧಿಸಿದ ಇಲಾಖೆ/ಪ್ರಾಧಿಕಾರಗಳು ಅನುಮತಿ ನೀಡಬೇಕು. ಮಾರಾಟ ಮಳಿಗೆಗಳು ಕನಿಷ್ಟ ೬ ಮೀಟರ್ ಅಂತರವನ್ನು ಹೊಂದಿರಬೇಕು. ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಹಾಕಬೇಕು ಮತ್ತು ಪರವಾನಿಗೆದಾರರು ಕಡ್ಡಾಯವಾಗಿ ತಮ್ಮ ಮಾರಾಟ ಮಳಿಗೆಯಲ್ಲಿ ಹಾಜರಿರಬೇಕು.

ಹಸಿರು ಪಟಾಕಿ ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸ್ ಮಾಡುವುದು ಹಾಗೂ ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕನಿಷ್ಟ ೬ ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಪಟಾಕಿ ಮಾರಾಟಗಾರರು ಮತ್ತು ಖರೀದಿಸಲು ಬರುವ ಗ್ರಾಹಕರು ಕಡ್ಡಾಯವಾಗಿ ಮುಖಗವಸು ಧರಿಸುವಂತೆ ಹಾಗೂ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಸಂಬಂಧಪಟ್ಟ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ವಿಪತ್ತು ನಿರ್ವಹಣಾ ಕಾಯಿದೆ ೨೦೦೫ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೮೮ರ ಅಡಿಯಲ್ಲಿ ಶಿಸ್ತಿನ /ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು  ಎಂದು ದ.ಕ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.