ದೀಪದ ಮಹತ್ವ

ಭಾರತೀಯ ಪರಂಪರೆಯಲ್ಲಿ ಒಂದೊಂದು ರೀತಿಯ ಆಚರಣೆಗಳು, ಒಂದೊಂದು ವೈಶಿಷ್ಠ್ಯತೆಯಿಂದ ಕೂಡಿವೆ. ಅದರಲ್ಲೂ ಸಂಪ್ರದಾಯಬದ್ದತೆ ಎಲ್ಲೆಡೆಯಲ್ಲಿ ವ್ಯಾಪಿಸಿ, ಶುದ್ಧ-ಬದ್ಧತೆಯನ್ನು ಗಟ್ಟಿಗೊಳಿಸಿವೆ. ಹಿಂದೂ ಪರಂಪರೆಯಲ್ಲಿ ಬೆಳಕಿಗೆ ಬಹು ಮಹತ್ವ ನೀಡಲಾಗಿದೆ. ಬೆಳಕು ಜ್ಞಾನದ ಸಂಕೇತ. ಶುಭೋದಯದ ಕುರುಹು. ಬೆಳಕಿನಿಂದಲೇ ಸಕಲ ಸಂಪದಗಳ ಪ್ರಾಪ್ತಿ. ಬದುಕಿಗೆ ಬೆಳಕು ಬೇಕು. ದೀಪ ಎಂದರೆ ಶಾಂತಿ. ದೀಪ ಎಂದರೆ ಸಮೃದ್ಧಿ. ದೀಪ ಎಂದರೆ ಸಂಪದ. ದೀಪ ಎಂದರೆ ಸಂಪತ್ತು. ದೀಪ ಎಂದರೆ ಆರೋಗ್ಯ. ದೀಪ ಎಂದರೆ ಪ್ರಖರತೆ, ದೀಪ ಎಂದರೆ ಭಾಗ್ಯ. ದೀಪ ಎಂದರೆ ಬೆಳಕು. ದೀಪವನ್ನು ಮಹಾಲಕ್ಷ್ಮಿಯ ಸಂಕೇತ ಎನ್ನಲಾಗಿದೆ.
ನಕಾರಾತ್ಮಕತೆಯನ್ನು ಕಳೆದು ಸಕಾರಾತ್ಮಕತೆಯನ್ನು ಮೂಡಿಸುವುದೇ ದೀಪ. ಅದು ಅಭಿವೃದ್ಧಿ-ಉಜ್ವಲತೆ. ಇಂತಹ ದೀಪವನ್ನು ಬೆಳಗಿಸುವುದೆಂದರೆ ಸಂತೋಷ, ನೆಮ್ಮದಿ, ಸುಖ, ಶಾಂತಿಯನ್ನು ವೃದ್ಧಿಸಿದಂತೆ. ದೀಪದಿಂದ ಏನೆಲ್ಲವನ್ನೂ ಅರ್ಥೈಸಿಕೊಳ್ಳಬಹುದು. ಬದುಕಿನೊಂದಿಗೆ ಉತ್ತಮತ್ವವನ್ನು ಹೆಣೆದುಕೊಂಡು ಮಹತ್ವದ ಸಂದೇಶವನ್ನು ದೀಪ ನೀಡುತ್ತದೆ. ಶುಭ ಕಾರ್ಯಕ್ರಮಗಳಲ್ಲಿ, ಮೇರು ಸಂಭ್ರಮಗಳಲ್ಲಿ ದೀಪ ಪ್ರಜ್ವಲನೆ ಮಹತ್ವ ಹೊಂದಿದೆ. ದೀಪ ಹೊತ್ತಿಸುವುದರಿಂದ ಕತ್ತಲೆ ಕಳೆದು, ಶುಭ್ರ ಭಾವ ಮೇಳೈಸುವುದು. ಅಂತೆಯೇ ಜ್ಞಾನದ ದೀಪ ಮನದಲ್ಲಿ ಹೊತ್ತಿದರೆ ಬದುಕಿನ ಕತ್ತಲೆ ಸರಿದು, ಸುಜ್ಞಾನದ ಹೊಂಬೆಳಕು ಮೂಡುವುದು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಮ್ಪದಾಮ್ |
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿ ನಮೋಸ್ತುತೇ ||

ದೇವರ ಪೂಜೆ, ದೈವಾರಾಧನೆ, ಪ್ರಾರ್ಥನೆ ಮೊದಲಾದ ಕ್ರಮಗಳಲ್ಲಿ ದೀಪವನ್ನು ಹೊತ್ತಿಸಿ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ಪ್ರಾಪ್ತಿಗಾಗಿ ಅನುದಿನ ಕೋರಿಕೆಯ ಎಳೆಯಾಗಿ ದೀಪ ಸಾಧ್ಯಂತತೆಯನ್ನು ಒಗ್ಗೂಡಿಸುತ್ತ ಬಂದಿದೆ. ಯಾವುದೇ ಕಾರ್ಯಕ್ರಮಗಳಿರಲಿ, ಪೂಜಾ-ಆರಾಧನೆಗಳಿರಲಿ, ಎಲ್ಲವೂ ಶುಭಾರಂಭಗೊಳ್ಳುವುದು ದೀಪ ಪ್ರಜ್ವಲನೆಯ ಮೂಲಕವೇ. ಎಂತಹ ದೊಡ್ಡ ವ್ಯಕ್ತಿಯಾದರೂ ದೀಪ ಬೆಳಗಿಸುವ ಸಂದರ್ಭದಲ್ಲಿ ಪಾದರಕ್ಷೆಗಳನ್ನು ಬಿಚ್ಚಿ ಗೌರವ ಸೂಚಿಸುವುದನ್ನು ಕಾಣುತ್ತೇವೆ. ಅದು ದೀಪಕ್ಕಿರುವ ಮಹತ್ವವನ್ನೂ, ಪೂಜ್ಯತ್ವವನ್ನೂ, ಗೌರವವನ್ನೂ ತೋರುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ತಿಳಿಗೊಂಡು ಮಾನಸಿಕ, ಭೌತಿಕ ಶಾಂತಿ ನೆಲೆಗೊಂಡು ಧನಾತ್ಮಕ ಚಿಂತನೆಗಳು ಮೈದಾಳುತ್ತವೆ.
ದೀಪವು ಪ್ರಕಾಶ ನೀಡುವ ಒಂದು ಸಾಧನ. ಮುಂಜಾವಿನಿಂದ ಸಂಜೆಯವರೆಗಿನ ಮಾನವನ ಜೀವನವೆಂದರೆ ಒಂದು ದೀಪವಿಶ್ವವೇ ಆಗಿದೆ. ಕಾರ್ಯ ಮತ್ತು ಕಾರಣಗಳಿಗಾಗಿ ವಿಶೇಷ ಮಹತ್ವಪೂರ್ಣತೆಯನ್ನು ಹೊಂದಿರುವ ದೀಪ ಅಸಾಧಾರಣ ಹಾಗೂ ಅಸಾಮಾನ್ಯವಾದ ಇತಿಹಾಸವನ್ನು, ಪರಂಪರೆಯನ್ನು, ಹಿನ್ನೆಲೆಯನ್ನು ಹೊಂದಿದೆ. ಅದನ್ನಿಲ್ಲಿ ಅವಲೋಕಿಸುವವರಾಗೋಣ:

 • ದೀಪಗಳ ಮಹತ್ವ: ಜಗವ ಬೆಳಗುವ ಸೂರ್‍ಯ-ಚಂದ್ರರು ದಿವ್ಯ ದೀಪಗಳೇ ಆಗಿವೆ. ಹಗಲಿನಲ್ಲಿ ಸೂರ್‍ಯ, ಇರುಳಿನಲ್ಲಿ ಚಂದ್ರ ಬೆಳಕನ್ನಿತ್ತು ಸದಾವಕಾಲವೂ ಪ್ರಕಾಶಮಾನವಾಗಿ ಚೆಂಬೆಳಕನ್ನು ಸೂಸುತ್ತಿದ್ದರೂ, ಪೃಥ್ವಿಯ ಭ್ರಮಣದಿಂದಾಗಿ ಒಂದು ಭಾಗದಲ್ಲಿ ಸೂರ್‍ಯ ಪ್ರಕಾಶ ಸಿಗುವ ಕಾಲ ಮಾತ್ರ ಸೀಮಿತವಾಗಿರುತ್ತದೆ. ಅದೇ ರೀತಿ ಚಂದ್ರನ ಪ್ರಕಾಶವು ಕೂಡ ಸ್ವಲ್ಪ ರಾತ್ರಿಗಾಗಿ ಪೂರ್ಣ ಹಾಗೂ ನಂತರ ಕ್ಷೀಣವಾಗುತ್ತ ಹೋಗುತ್ತದೆ. ಈ ವಿಶ್ವದೀಪಗಳು ಸೀಮಿತ ಕಾಲದವರೆಗೆ ಪ್ರಕಾಶವನ್ನು ನೀಡುತ್ತವೆ. ಆದುದರಿಂದ ಉಳಿದ ಸಮಯದಲ್ಲಿ ಎಲ್ಲೆಡೆ ಅಂಧಃಕಾರ ಹರಡುತ್ತದೆ. ಈ ಕತ್ತಲಿನ ಸಮಯದಲ್ಲಿ ಪ್ರಕಾಶ ನೀಡುವ ಕೆಲಸವನ್ನು ಮಾಡುವ ಸಾಧನವೆಂದರೆ ದೀಪ. ಆದುದರಿಂದಲೇ ಅದರ ಸ್ಥಾನ ದೃಢವಾಗಿದೆ. ಆಗಸದಲ್ಲಿ ಅಸಂಖ್ಯ ನಕ್ಷತ್ರಗಳು ರಾತ್ರಿಯಲ್ಲಿ ಮಿನುಗುತ್ತ ಸೊಂಪನ್ನು ಒದಗಿಸುತ್ತವೆ. ಪ್ರಕೃತಿಮಯವಾದ ಈ ದೀಪಗಳು ಜಗವನ್ನು ಬೆಳಗಲು ಬಹು ಮಹತ್ವ ಪಡೆದುಕೊಂಡಿವೆ. ನಿತ್ಯ ಬದುಕಿನ ವ್ಯವಹಾರಕ್ಕೆ ಪೂರಕವಾಗಿ ಸತ್ಯ ಸಂಧತೆಯ ಬೆಳಗನ್ನು ಅವ್ಯಾಹತವಾಗಿ ದೊರಕಿಸುತ್ತಿವೆ. ಇವುಗಳು ಇಲ್ಲದಿದ್ದರೆ ವಿಶ್ವ ವ್ಯವಹಾರವು ನಡೆಯಲಸಾಧ್ಯ.
 • ದೀಪಗಳ ವಿಧಗಳು: ಪ್ರಕೃತಿದತ್ತವಾದ ಸೂರ್‍ಯ, ಚಂದ್ರ, ನಕ್ಷತ್ರಗಳು ಒಂದು ವಿಧವಾದರೆ, ಮಾನವನು ಅನೇಕಾನೇಕ ಶತಮಾನಗಳಿಂದ ಹಲವಾರು ರೀತಿಯ ದೀಪಗಳನ್ನು ತನ್ನ ಬುದ್ಧಿಮತ್ತೆಗೆ ತೋಚಿದಂತೆ ಶೋಧಿಸಿ, ಆಕರಿಸಿ, ನಿರ್ಮಿಸಿರುವನು. ಅವು ಪ್ರಮುಖವಾಗಿ ಮೂರು ವಿಧಗಳಾಗಿ ಕಾಣಸಿಗುತ್ತವೆ. ಎಣ್ಣೆಯ ದೀಪಗಳು, ಅನಿಲ ದೀಪಗಳು ಹಾಗೂ ವಿದ್ಯುತ್ ದೀಪಗಳೆಂಬುದಾಗಿ ವಿಂಗಡಣೆಗೊಂಡಿವೆ. ಇತ್ತೀಚಿನ ಸಂಶೋಧನೆಯಂತೆ ಸೌರ ವಿದ್ಯುತ್ ದೀಪಗಳೂ ಪ್ರಚಲಿತದಲ್ಲಿರುವುದು ಅದ್ಭುತ ಸಂಗತಿ.
 • ದೀಪದ ಪ್ರಾಚೀನತೆ: ಪ್ರಾಚೀನ ಕಾಲದಲ್ಲಿ ಮನುಷ್ಯ ಬೆಳಕನ್ನು ಪಡೆಯುವುದಕ್ಕೋಸ್ಕರವಾಗಿ ಹಲವಾರು ರೀತಿಯ ಪ್ರಯೋಗಗಳಿಂದ ದೀಪದ ರಚನೆ, ಬಳಕೆ, ಉಪಯೋಗ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಸಮುದ್ರದಲ್ಲಿ ಸಿಕ್ಕುವ ಚಿಪ್ಪು ಅಥವಾ ತೆಳುವಾದ ತಗ್ಗುಗಳಿರುವ ಕಲ್ಲುಗಳನ್ನು ಬಳಸಿ, ದೊರೆತ ಬೀಜಗಳಿಂದ ಎಣ್ಣೆ ತಯಾರಿಸಿ, ಕೆಲವು ವನಸ್ಪತಿಗಳಿಂದ, ಹತ್ತಿಯಿಂದ, ಮರದ ಬೇರುಗಳಿಂದ ಬತ್ತಿಗಳನ್ನು ಹದಗೊಳಿಸಿ, ಬೆಂಚು ಕಲ್ಲುಗಳನ್ನು ಪರಸ್ಪರ ಉಜ್ಜಿ, ಬರುವ ಕಿಡಿಯಿಂದ ದೀಪಗಳನ್ನು ಹೊತ್ತಿಸುವ ಪ್ರತೀತಿ ಉಗಮಗೊಂಡಿತು. ಪ್ರಾಚೀನ ಭಾರತೀಯ ವಾಸ್ತುಶಿಲ್ಪ, ಶಾಸನ ಮೊದಲಾದವುಗಳಲ್ಲಿ ದೀಪಗಳ ಉಲ್ಲೇಖವಿದ್ದು, ಮೊಹಂಜೋದಾರೋದಲ್ಲಿ ನಡೆಸಿದ ಉತ್ಖನಗಳ ಮೇಲಿಂದ ಐದು ಸಾವಿರ ವರ್ಷಗಳ ಹಿಂದೆಯೇ ಬೀದಿ ದೀಪಗಳು ಇದ್ದವು ಎಂಬುದಾಗಿ ತಿಳಿದು ಬಂದಿದೆ.
  ಗ್ರೀಕ್‌ರು, ರೋಮನ್‌ರು ಮಾತ್ರ ದೀಪಗಳನ್ನು ತಯಾರಿಸಲು ಪಂಚಧಾತು, ಹಿತ್ತಾಳೆ ಅಥವಾ ಚೀನಿ ಮಣ್ಣನ್ನು ಬಳಕೆ ಮಾಡಿ ತಟ್ಟೆಯಂತೆ ಅಗಲವಾದ ದೀಪಗಳನ್ನು ರಚನೆಗೊಳಿಸಿದ್ದನ್ನು ಮರೆಯಲಾಗದು. ಭಾರತೀಯ ಪರಂಪರೆಯಲ್ಲಿ ದೇಗುಲ, ಮಂದಿರ, ಮಠಗಳಲ್ಲಿ ಚಿನ್ನ, ಬೆಳ್ಳಿ, ಕಂಚು, ತಾಮ್ರ, ಹಿತ್ತಾಳೆ, ಮಣ್ಣು ಮೊದಲಾದವುಗಳಿಂದ ಮಾಡಿದ ದೀಪಗಳು ಬಳಕೆಗೊಂಡವು. ಮುಂದೆ ಕಾಲಾಂತರದಲ್ಲಿ ಅನಿಲ ದೀಪಗಳನ್ನು ಪತ್ತೆ ಮಾಡಿ, ನವ್ಯ ಮಾದರಿಯ ದೀಪಗಳಿಗೆ ನಾಂದಿ ಹಾಡಲಾಯಿತು. ಕ್ರಮೇಣ ಅನಿಲ ದೀಪಗಳು ಮರೆಯಾಗಿ ೧೯ನೇ ಶತಕದಲ್ಲಿ ವಿದ್ಯುತ್ ದೀಪಗಳನ್ನು ಆವಿಷ್ಕಾರಗೊಳಿಸಿ ವಿವಿಧ ಮಾದರಿಯ, ವೈಶಿಷ್ಠ್ಯಪೂರ್ಣತೆಯ, ಸುಂದರ, ವರ್ಣಮಯ, ಕಲಾತ್ಮಕತೆಯಿಂದ ಕೂಡಿದ ಹಲವಾರು ಬಗೆಯ ದೀಪಗಳನ್ನು ನಾವಿಂದಿಗೂ ಕಾಣಬಹುದಾಗಿದೆ. ಏನೆಲ್ಲ ಹೊಸತನ ಬಂದರೂ ಇಂದಿಗೂ ಎಣ್ಣೆ ಹಾಗೂ ಹತ್ತಿಯ ಬತ್ತಿಯಿರುವ ಹಣತೆಗಳ ಸ್ಥಾನಮಾತ್ರ ಸ್ಥಿರವಾಗಿ ಮುನ್ನಡೆದಿದ್ದು ವಿಶೇಷ.
 • ದೀವಟಿಕೆ: ದೀವಟಿಕೆ ಅಥವಾ ಪಂಜು ಎಂದು ಕರೆಯಿಸಿಕೊಳ್ಳುವ ವಿಶಿಷ್ಠ ಪ್ರಕಾಶ ನೀಡುವಂತಹವುಗಳೂ ದೀಪವೇ ಆಗಿವೆ. ಹಿಂದೆ ಗುರು ಪರಂಪರೆ ಪಲ್ಲಕ್ಕಿಯಲ್ಲಿ ಸಂಚರಿಸುವಾಗ ರಾತ್ರಿ ಸಮಯದಲ್ಲಿ ದೀವಟಿಕೆಗಳ ಬಳಕೆಯಾಗುತ್ತಿತ್ತು. ಅರಮನೆಗಳಲ್ಲಿ, ಗುರುಮನೆಗಳಲ್ಲಿ, ಸೆರೆಮನೆಯಲ್ಲಿ, ಗುಡಿಸಲುಗಳಲ್ಲಿ, ಕೋಟೆ-ಕೊತ್ತಲುಗಳಲ್ಲಿ ದೀವಟಿಕೆಗಳು ಹೆಚ್ಚು ಪ್ರಚಲಿತದಲ್ಲಿದ್ದವು. ರಾತ್ರಿ ಸಂಚಾರಕ್ಕೆ ಸದಾ ಜೊತೆಗೂಡಿ ಬೆಳಕಿನ ದಾರಿ ತೋರಿಸುವಂತಹ ಮಹತ್ತರ ಕಾರ್ಯವನ್ನು ದೀವಟಿಕೆಗಳು ನಿರ್ವಹಿಸುತ್ತಿದ್ದವು. ಇಂದಿಗೂ ಈ ವ್ಯವಸ್ಥೆ ಕೆಲವು ಕಡೆಗಳಲ್ಲಿ ಕಾಣಸಿಗುತ್ತಿದ್ದು, ದೈವ ಕಾರ್ಯಗಳಲ್ಲಿ ಬಳಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಬಳಕೆ ಇಂದಿಗೂ ಜೀವಂತವಿದೆ.
 • ದೀಪೋತ್ಸವ: ಹಬ್ಬದ ದಿಬ್ಬಣವನ್ನು ಹುಬ್ಬೇರಿಸುವಂತೆ ಹರುಷದ ಹೊನಲಿನಲ್ಲಿ ತೇಲುವಂತೆ ಮಾಡುವ ಉತ್ಸವಗಳು ಮನುಷ್ಯನ ಜೀವನದಲ್ಲಿ ಅರ್ಥಪೂರ್ಣತ್ವವನ್ನು ತಂದುಕೊಡುತ್ತವೆ. ದೇಶದ ತುಂಬೆಲ್ಲ ಹಬ್ಬಿಕೊಂಡಿರುವ ದೇಗುಲಗಳ ಪ್ರಾಂಗಣದಲ್ಲಿ ದೀಪಸ್ತಂಭಗಳನ್ನು ನಾವಿಂದಿಗೂ ಕಾಣುತ್ತೇವೆ. ಅಲ್ಲೆಲ್ಲ ಸಹಸ್ರ ಸಹಸ್ರ ದೀಪಗಳನ್ನು ಪ್ರಜ್ವಲಿಸುವ ಪ್ರತೀತಿ ಇದೆ. ದೀಪ ಮಂಟಪ, ದೀಪ ಮಾಲಿಕೆ, ದೀಪ ಮಂದಿರ, ದೀಪ ರಥ, ದೀಪ ತೆಪ್ಪ, ದೀಪಾರ್ಚನೆ, ದೀಪೋತ್ಸವ, ಕಾರ್ತಿಕೋತ್ಸವ ಮೊದಲಾದ ರೀತಿಯಾಗಿ ಅನೇಕ ಬಗೆಯ ಸಂಪ್ರದಾಯಗಳನ್ನು ಆಚರಿಸಿಕೊಂಡು ಮುನ್ನಡೆಯುತ್ತಿರುವುದನ್ನು ಕಾಣುತ್ತೇವೆ.
  ಗಂಗಾರತಿ-ತುಂಗಾರತಿ ಮೊದಲಾದ ಕ್ರಮಗಳ ಪದ್ಧತಿಗಳು ನಮ್ಮ ಮಧ್ಯದಲ್ಲಿವೆ. ಪ್ರಮುಖ ಕ್ಷೇತ್ರಗಳಲ್ಲಿ ದೀಪೋತ್ಸವ, ಶತ ದೀಪೋತ್ಸವ, ಸಹಸ್ರ ದೀಪೋತ್ಸವ, ಲಕ್ಷ ದೀಪೋತ್ಸವ, ಕೋಟಿ ದೀಪೋತ್ಸವಗಳು ವೈಶಿಷ್ಠ್ಯವಾಗಿ ಕಳೆ ಕಟ್ಟುತ್ತವೆ. ಇದಕ್ಕೆಂದೇ ಭಾರತೀಯ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬವನ್ನು ಪರಂಪರಾಬದ್ಧವಾಗಿ ಆಚರಿಸುತ್ತ ಬಂದಿರುವುದನ್ನು ಕಾಣುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕ್ರಿಸ್‌ಮಸ್ ಹಬ್ಬದಂದು ಸಾಮಾನ್ಯವಾಗಿ ಆಕಾಶ ದೀಪವನ್ನು ಎತ್ತರದ ಜಾಗದಲ್ಲಿಡುವ ಪದ್ಧತಿ ಇದೆ. ಶ್ರಾವಣ ಶುಕ್ರವಾರದಂದು ಕೆಲವು ಕಡೆ ಹಿಟ್ಟಿನ ದೀಪಗಳನ್ನು ಉರಿಸುತ್ತಾರೆ. ಆಷಾಢಮಾಸದ ಅಮವಾಸ್ಯೆಯಂದು ವರ್ಷವಿಡೀ ಉಪಯೋಗಿಸಿದ ದೀಪಗಳನ್ನು ವಿಸರ್ಜಿಸಿ ಹೊಸದೀಪಗಳನ್ನು ತರುತ್ತಾರೆ. ಪವಿತ್ರ ಕಾರ್ಯಗಳನ್ನು ಮಾಡುವಾಗ ಸಾಕ್ಷಿ ದೀಪಗಳನ್ನು ಹೊತ್ತಿಸುವ ಪ್ರತಿತಿ ಇದೆ. ಹಿಂದಿನ ಕಾಲದಲ್ಲಿ ರಾಜಮಹಾರಾಜರುಗಳು, ರಾಜಗುರುಗಳು ವಿಜಯಯಾತ್ರೆಗೈದ ಸಂದರ್ಭಗಳಲ್ಲಿ ದೀಪಗಳನ್ನು ಅಧಿಕ ಪ್ರಮಾಣದಲ್ಲಿ ಹೊತ್ತಿಸಿ ಗೌರವಿಸುವ ಹಿನ್ನೆಲೆಯನ್ನು ನಾವಿಲ್ಲಿ ತಿಳಿಯಬಹುದು.
  *ನೈಸರ್ಗಿಕ ದೀಪಗಳು: ಸೃಷ್ಠಿಯಲ್ಲಿ ಕಾಣಸಿಗುವ ಇರುವೆ ಎಂಭತ್ನಾಲ್ಕು ಲಕ್ಷ ಜೀವರಾಶಿಗಳು ವಿಭಿನ್ನತೆಯಿಂದ ಕೂಡಿವೆ. ಅವುಗಳಲ್ಲಿ ಮಿಂಚು ಹುಳುಗಳೂ ಸಹ ದೀಪಗಳೇ ಆಗಿವೆ. ಕರಾವಳಿ ಭಾಗದಲ್ಲಿ ಮಳೆಗಾಲದ ಮೊದಲು ಅಸಂಖ್ಯ ಮಿಂಚುಹುಳುಗಳು ಮಿಂಚುತ್ತಾ, ಗಿಡಮರಬಳ್ಳಿಗಳಲ್ಲಿ ಮುತ್ತಿಕ್ಕಿರುವ ಹುಳುಗಳ ಬೆಳಕು ದೀಪದಂತೆಯೇ ಕಾಣಸಿಗುತ್ತದೆ. ಈ ಹುಳುಗಳು ಕಂಡು ಬಂದಾಗ ತ್ರಿಕಾಲಗಳ ನಿರ್ಣಯ ನಡೆಯುತ್ತದೆ.
 • ಮಂಗಳದಾಯಕ ದೀಪಗಳು: ಅಣು-ಕಣದಲ್ಲಿಯೂ ದೈವತ್ವವನ್ನು ಕಂಡ ದೇಶ ಭಾರತದಲ್ಲಿ ಪಾವಿತ್ರ್ಯತೆಯನ್ನು ತುಂಬುವ ದೀಪಗಳ ಬಳಕೆ ದೈವದೊಂದಿಗೆ ಬಹುತರವಾದ ಸಂಬಂಧವನ್ನು ಬೆಸೆದುಕೊಂಡು ಬಂದಿವೆ. ಪೂಜಾರಂಭಕ್ಕೂ ಮುನ್ನ, ದೀಪ ಹೊತ್ತಿಸಿ ದೀಪಗಳ ಮಂಗಳ ಪ್ರಕಾಶದಲ್ಲಿ ಆಚರಣೆಗಳು ವಿಧಿವತ್ತಾಗಿ ಸಾಗುವವು. ದೇವರ ಮನೆಯಲ್ಲಿ, ನಡುಮನೆಯಲ್ಲಿ, ಬಾಗಿಲಲ್ಲಿ, ಮುಂಬಾಗಿಲಲ್ಲಿ ದೀಪಗಳ ಬಳಕೆ ಮಹತ್ವ ಹೊಂದಿವೆ. ಮನೆ-ಮನದ ಅಶಾಂತಿಯನ್ನು ಕಳೆದು ಶುದ್ಧತರವಾದ ಪ್ರಶಾಂತಿಯನ್ನು ದೀಪಗಳು ನೀಡುತ್ತವೆ. ನಂಬಿಕೆ, ವಿಶ್ವಾಸಗಳು ಗಟ್ಟಿಗೊಳ್ಳುತ್ತವೆ. ಮದುವೆ, ಮಂಗಲ ಸಮಾರಂಭಗಳಲ್ಲಿ ವಿಶೇಷವಾಗಿ ದೀಪಗಳದ್ದೇ ಪಾರುಪತ್ಯವಿರುತ್ತದೆ.
 • ಗುರುದೀಪ: ಶ್ರೀಗುರು ಆಧ್ಯಾತ್ಮಿಕ ಸಾಮ್ರಾಜ್ಯದ ಚಕ್ರವರ್ತಿ. ಆತ ಆತ್ಮಾನುಭವದ ವಾರಿಧಿ. ಲೋಕಕಲ್ಯಾಣವೇ ಶ್ರೀಗುರುವಿನ ಮೂಲ ಧ್ಯೇಯ. ಪರಮ ಗುರುವಿನ ಸಾನ್ನಿಧ್ಯವನ್ನು ಅರಸಿ ಬಂದಾತನೇ ನಿಜವಾದ ಶಿಷ್ಯ. ಅವರಿಬ್ಬರೂ ಸೇರಿದಾಗಲೇ ಜೀವನದ ಪರಮ ಗುರಿ ತಲುಪಲು ಸಾಧ್ಯ ಶ್ರೀಗುರು ಅರಿವಿನ ಚೈತನ್ಯದ ಪ್ರತೀಕ. ಶ್ರೇಷ್ಠ-ಕನಿಷ್ಠ, ಬಡವ-ಶ್ರೀಮಂತ, ಪಾಪಿ-ಪುನೀತ ಎನ್ನದೇ ಎಲ್ಲರಿಗೂ ಸಮಾನ ಬೆಳಗು ಸೂರ್ಯ ಕೊಡುವಂತೆ ಕರುಣಾನಿಧಿಯಾದ ಗುರುವಾದರೂ ಸಕಲ ಜೀವರಾಶಿಗಳನ್ನು ತನ್ನ ಕರುಣೆಯ ಕಾರುಣ್ಯದಿಂದ ಹರಸಿ ಮುನ್ನಡೆಸುವನು. ಸಂಶಯದ ಜಾಲವೆಲ್ಲ ಶ್ರೀಗುರುವಿನ ಬೋಧಾಮೃತದಿಂದ ಮಂಜಿನಂತೆ ಕರಗಿ ಹೋಗುವುದು. ಜನ್ಮ ಜನ್ಮಾಂತರದ ಪಾಪತಾಪಗಳೆಲ್ಲ ಹೋಗಿ ಪರಿಶುದ್ಧನಾಗುವನು. ಶ್ರೀ ಗುರುವಿನ ಕಾರುಣ್ಯಸಾಗರದಲ್ಲಿ ಮಿಂದವರು ಪುಣ್ಯವಂತರು. ಪರಮ ಪವಿತ್ರರು ಹಾಗೂ ಪಾವನರಾಗುವುದರಲ್ಲಿ ಅನುಮಾನವಿಲ್ಲ. ದೇಹವೆಂಬ ಗುಡಿಯಲ್ಲಿ ಕತ್ತಲೆ ಇರಬಾರದೆಂದು, ಜ್ಞಾನ ದೀವಿಗೆಯನ್ನು ಹಚ್ಚಿ, ಉಜ್ವಲ ಬದುಕನ್ನು ಕರುಣಿಸುವವನಾಗಿದ್ದಾನೆ.
 • ದೀಪ ಹೇಗೆ ಹಚ್ಚಬೇಕು: ಪ್ರಾಥಃಕಾಲ ಮತ್ತು ಸಂಜೆ ದಿನಕ್ಕೆರಡು ಸಲ ದೀಪವನ್ನು ಮನೆಯಲ್ಲಿ ಹೊತ್ತಿಸುವ ಪ್ರತೀತಿ ಇದೆ. ಸಂಜೆ ಹೊತ್ತು ಮನೆಯಲ್ಲಿ ದೀಪ ಹಚ್ಚುವಾಗ ಹಿಂದಿನ ಬಾಗಿಲನ್ನು ಹಾಕಿ, ಮುಂದಿನ ಬಾಗಿಲನ್ನು ತೆರೆದಿಡಬೇಕು. ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಯಾರ ಮನೆಯಲ್ಲಿ ದೀಪ ಉರಿಯುತ್ತಿರುತ್ತದೆಯೋ ಅಂತಹ ಮನೆಗೆ ದಾರಿದ್ರ್ಯ ಪ್ರವೇಶಿಸುವುದಿಲ್ಲ. ದೀಪವು ಪೂರ್ವಾಭಿಮುಖವಾಗಿ ಇದ್ದರೆ ಆಯಸ್ಸು ವೃದ್ಧಿ. ದೀಪವು ಉತ್ತರಾಭಿಮುಖವಾಗಿ ಇದ್ದರೆ ಹಣ ವೃದ್ಧಿ. ಪಶ್ಚಿಮಾಭಿಮುಖವಾಗಿದ್ದರೆ ದುಃಖ. ದಕ್ಷಿಣಾಭಿಮುಖವಾಗಿದ್ದರೆ ಹಾನಿ. ದೀಪವು ನಾಲ್ಕೂ ಕಡೆಗಳಲ್ಲಿ ಮುಖಮಾಡಿದ್ದರೆ ಶುಭ. ದೀಪದ ಮೂಲೆಯಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ತುದಿಯಲ್ಲಿ ಶಿವ ಇರುವನು. ಆ ಪ್ರಜ್ವಲ ಪ್ರಶಾಂತ ಬೆಳಕೇ ಸರಸ್ವತಿ ಎಂದೂ, ದೀಪದ ಮೇಲ್ಭಾಗ ಲಕ್ಷ್ಮಿ ಎಂಬುದಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
  ಪ್ರತಿನಿತ್ಯ ದೀಪಾರಾಧನೆಯನ್ನು ಮನೆಯಲ್ಲಿ ಯಾರು ಮಾಡಿದರೂ ಒಳ್ಳೆಯದು. ಆದರೆ ಎರಡು ಬತ್ತಿಗಳನ್ನು ಕಡ್ಡಾಯವಾಗಿ ಹಾಕಬೇಕು. ಹಬ್ಬದ ದಿನಗಳಲ್ಲಿ ಮಾತ್ರ ಐದು ಬತ್ತಿಯಿಂದ ಮಾಡಿದ ದೀಪವನ್ನು ಬೆಳಗಿಸಬೇಕು. ದೀಪವನ್ನು ಹಸುವಿನ ತುಪ್ಪದಿಂದ, ಮತ್ತೊಂದು ಕಡೆ ಎಳ್ಳಿನ ಎಣ್ಣೆಯಿಂದ ಇಲ್ಲವೇ, ಬೇವಿನ ಎಣ್ಣೆಯಿಂದ ಹಚ್ಚಬೇಕು. ಇದರಿಂದ ಒಳಿತಾಗುವುದು. ಮಾನವ ಜೀವನದ ಅವಿಭಾಜ್ಯ ಅಂಗವಾಗಿರುವ ದೀಪಜ್ಯೋತಿಗಳು, ಬದುಕಿನೊಂದಿಗೆ ಬೆಸೆದುಕೊಂಡು ಬಂದಿವೆ. ದೀಪ ಜ್ವಾಲೆಯನ್ನಾಧರಿಸಿ ಶುಭಾಶುಭಗಳನ್ನು ಹೇಳುವ ಪದ್ಧತಿಯೂ ಕಂಡುಬರುತ್ತದೆ. ದೀಪ ಒಣಗಿದರೆ ಸಂಪತ್ತು ನಾಶ. ಬಿಳಿಜ್ವಾಲೆ ಅನ್ನನಾಶ. ಕಪ್ಪುಜ್ವಾಲೆ ಮರಣದ ಸಂಕೇತ. ಗಾಳಿಗೆ ನಂದಿದರೆ ಅಥವಾ ಕೈಜಾರಿ ಬಿದ್ದರೆ ಅಶುಭವೆಂಬುದಾಗಿ ಅರ್ಥೈಸಲಾಗಿದೆ. ವಿಳಾಸ: ಡಾ. ಗುರುಪಾದಯ್ಯ ವೀ. ಸಾಲಿಮಠ ಶ್ರೀ ರಂಭಾಪುರೀಶ ನಿವಾಸ, ಹರವಿ ಓಣಿ, ಸವಣೂರು-೫೮೧೧೧೮ ಹಾವೇರಿ ಜಿಲ್ಲೆ