ದೀದಿಗೆ ಬಂಗಾಳ ಭದ್ರ, ಅಸ್ಸಾಂ ಎನ್‌ಡಿಎ ವಶ ತಮಿಳುನಾಡು ಡಿಎಂಕೆ, ಕೇರಳ ಕಮ್ಯುನಿಸ್ಟ್ ಪಾಲು ಸಮೀಕ್ಷೆ ಬಹಿರಂಗ

ನವದೆಹಲಿ, ಮಾ.೨೫- ಪಂಚ ರಾಜ್ಯಗಳ ವಿಧಾನಸಭೆಗೆ ವಿವಿಧ ಹಂತದಲ್ಲಿ ನಡೆಯುವ ಚುನಾವಣಾ ದಿನ ಸಮೀಪಿಸುತ್ತಿದಂತೆ ಪ್ರಚಾರ ಬಿರುಸು ಪಡೆದುಕೊಂಡಿದೆ. ಒಬ್ಬರ ಮೇಲೆ ಮತ್ತೊಬ್ಬರು ಟೀಕಾ ಪ್ರಹಾರ ನಡೆಸಿ ಜನಮನ ಗೆಲ್ಲಲು ಪೈಪೋಟಿ ನಡೆಸಿದ್ದಾರೆ.
ಹೈವೋಲ್ಟೇಜ್‌ನಿಂದ ಕೂಡಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಅಸ್ಸಾಂನಲ್ಲಿ ಎನ್‌ಡಿಎ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ, ಕೇರಳದಲ್ಲಿ ಎಡಪಕ್ಷಗಳ ಕೈಗೆ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎನ್‌ಡಿಎಗೆ ಅಧಿಕಾರ ಸಿಗಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಕಳೆದ ಹದಿನೈದು ದಿನಗಳ ಚುನಾವಣಾ ಅಖಾಡದ ಆಧಾರದ ಮೇಲೆ ಈ ಸಮೀಕ್ಷಾ ವರದಿ ಬಹಿರಂಗ ಮಾಡಲಾಗಿದೆ.
ಪ್ರತಿಷ್ಠೆಯ ಕಣವಾಗಿರುವ ಪಶ್ಚಿಮ ಬಂಗಾಳದ ೨೯೪ ಕ್ಷೇತ್ರಗಳ ಪೈಕಿ ಆಡಳಿತಾರೂಢ ಟಿಎಂಸಿ ಪಕ್ಷ ೧೬೦ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಟಿಎಂಸಿ ಪಕ್ಷ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಶತಾಯ-ಗತಾಯ ಈ ಬಾರಿ ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಬಿಜೆಪಿ ಕನಸು ಸದ್ಯದ ಮಟ್ಟಿಗೆ ಕೈಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸಿ-ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಈ ಬಾರಿ ಮತ್ತೊಮ್ಮೆ ಟಿಎಂಸಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.
ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ೨೩೪ ಕ್ಷೇತ್ರಗಳಲ್ಲಿ ೧೭೭ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದ ಆಡಳಿತಾರೂಢ ಎಐಎಡಿಎಂಕೆ ಪಕ್ಷ ಕೇವಲ ೪೯ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.
ಕೇರಳದಲ್ಲಿ ಎಡಪಕ್ಷಗಳ ನೇತೃತ್ವದಲ್ಲಿ ಎಲ್‌ಡಿಎಫ್ ೧೪೦ ಕ್ಷೇತ್ರಗಳ ಪೈಕಿ ೭೭ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಈ ಮೂಲಕ ಕೇರಳದಲ್ಲಿ ಪಿಣರಾಣಿ ವಿಜಯನ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ಅಂದಾಜು ಮಾಡಲಾಗಿದೆ.
ಕಳೆದ ಬಾರಿಯ ವಿಧಾನಸಭ ಚುನಾವಣೆಯಲ್ಲಿ ಎಲ್‌ಡಿಎಫ್ ೮೨ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಅಸ್ಸಾಂನ ೧೨೬ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮಿತ್ರಕೂಟ ೬೯ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ೫೬ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೆರಿ ನೇತೃತ್ವದ ಮೈತ್ರಿಕೂಟ ೩೦ ವಿಧಾನಸಭಾ ಕ್ಷೇತ್ರಗಳ ಪೈಕಿ ೨೧ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.
ಮಾರ್ಚ್ ೨೭ ರಿಂದ ಏಪ್ರಿಲ್ ೨೯ರ ತನಕ ಪಶ್ಚಿಮಬಂಗಾಳದಲ್ಲಿ ೮ ಹಂತ, ಅಸ್ಸಾಂನಲ್ಲಿ ಮೂರು ಹಂತ, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ ಏಪ್ರಿಲ್ ೬ ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಈ ಎಲ್ಲಾ ರಾಜ್ಯಗಳ ಚುನಾವಣೆ ಜೊತೆಗೆ ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯ ಫಲಿತಾಂಶ ಮೇ ತಿಂಗಳ ೨ ರಂದು ಪ್ರಕಟವಾಗಲಿದೆ. ಅಲ್ಲಿಯತನಕ ಚುನಾವಣಾ ಟ್ರೆಂಡ್ ಬದಲಾಗುತ್ತಲೇ ಸಾಗಲಿದೆ.

ಪಂಚ ರಾಜ್ಯಗಳಲ್ಲಿ ಯಾರಿಗೆ ಅಧಿಕಾರ

  • ಪಶ್ಚಿಮ ಬಂಗಾಳ- ಟಿಎಂಸಿ
  • ಅಸ್ಸಾಂ- ಎನ್ ಡಿಎ ಮೈತ್ರಿಕೂಟ
  • ತಮಿಳುನಾಡು- ಡಿಎಂಕೆ ಮೈತ್ರಿಕೂಟ
  • ಪುದುಚೆರಿ- ಎನ್ ಡಿಎ ಮೈತ್ರಿಕೂಟ
  • ಕೇರಳ – ಎಲ್ ಡಿ ಎಫ್ ಮಮೈತ್ರಿಕೂಟ

ಅಧಿಕಾರ ಹಿಡಿಯಲಿದೆ ಎಂದು ಸಿ-ವೋಟರ್ ಸಂಸ್ಥೆ ಹದಿನೈದು ದಿನಗಳ ಟ್ರೆಂಡ್ ಆಧರಿಸಿ ಈ ಭವಿಷ್ಯ ನುಡಿದಿದೆ.