ದೀಟೂರು ಏತನೀರಾವರಿ ಯೋಜನೆಯ ಲೋಪದೋಷ ಸರಿಪಡಿಸಲು ಒತ್ತಾಯ

ದಾವಣಗೆರೆ. ಜೂ.೭; ಜಗಳೂರು ವಿಧಾನಸಭಾ ಕ್ಷೇತ್ರದ ೫೭ ಕೆರೆಗಳ ದೀಟೂರು ಏತನೀರಾವರಿ ಯೋಜನೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಭದ್ರಾ ಮೇಲ್ದಂಡೆ ಯೋಜನೆ ಸದಸ್ಯ ಕೆ.ಬಿ ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಈ ಯೋಜನೆಯು ಹರಿಹರ ತಾಲ್ಲೂಕು ದೀಟೂರು ಗ್ರಾಮದ ತುಂಗಾಭದ್ರಾ ನದಿಯ ದಡದಲ್ಲಿ ಜಾಕ್ವೆಲ್ ನಿರ್ಮಾಣ , ಇಲ್ಲಿ 2400 . ಹೆಚ್.ಪಿ. ಸಾಮರ್ಥ್ಯದ 8 ಮೋಟರ್‌ಗಳ ಅಳವಡಿಕೆ , ಇದರಿಂದ 1.39 ಟಿ.ಎಂ.ಸಿ. ನೀರನ್ನು ಇಲ್ಲಿಂದ ಸುಮಾರು 30 ಕಿ.ಮೀ. ದೂರದ ಅಣಜಿ ಸಮೀಪದ ಚಟ್ನಳ್ಳಿ ಗುಡ್ಡದವರೆಗೆ ನೀರನ್ನು ವಿದ್ಯುತ್‌ ಮೂಲಕ ಎತ್ತುವಂತಹದ್ದಾಗಿದೆ. ನಂತರ ನದಿಯಿಂದ ಈ ಗುಡ್ಡದವರೆಗೆ ಸುಮಾರು 600 ಅಡಿ ಎತ್ತರವುಂಟು , ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ ಈ ಯೋಜನೆಯ ವ್ಯಾಪ್ತಿಯ ಕೆರೆಗಳಿಗೆ ನೀರನ್ನು ಹರಿಸುವುದಾಗಿದೆ.ಆದರೆ ಈ ಯೋಜನೆಗೆ ಎಂ.ಎಸ್ . ಪೈಪನ್ನು ಹಾಕಲು ತಾಂತ್ರಿಕ ಮಂಜೂರಾತಿ ಪಡೆಯಲಾಗಿದೆ . ಈ ಪೈಪಿನ ಆಯಸ್ಸು ಕೇವಲ 25 ರಿಂದ 40 ವರ್ಷ ಮಾತ್ರ ಇರುವುದರಿಂದ ಈ ಪೈಪನ್ನು ಹಾಕಬಾರದು . ಹಾಗಾಗಿ ಈ ಪೈಪನ್ನು ಹಾಕದೇ ಹೆಚ್.ಡಿ. ಪೈಪನ್ನು ಹಾಕುವುದರಿಂದ ಇದರ ಆಯಸ್ಸು ಸುಮಾರು 100 ರಿಂದ 150 ವರ್ಷ . ಇದೆಲ್ಲವು ತಾಂತ್ರಿಕ ತಜ್ಞರ ಮಾಹಿತಿಯಿಂದ ಲಭ್ಯವಾಗಿದೆ . ಗುತ್ತಿಗೆದಾರರಿಗೆ ಪ್ರಸ್ತುತ ಇರುವ 5 ವರ್ಷದ ನಿರ್ವಹಣೆಯ ಬದಲು 10 ವರ್ಷಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಈ ಯೋಜನೆಯ ಕಾಮಗಾರಿಯಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು ಈ ನ್ಯೂನತೆಗಳನ್ನು ಇಲಾಖೆಯ ಇಂಜಿನಿಯರ್ ಗಳ ಗಮನಕ್ಕೆ ತರಲಾಗಿದೆ.ಪೈಪ್ ಲೈನ್ ನ ಸೂಕ್ಷ್ಮತೆಗಳನ್ನು ಗಮನಿಸಿ ಪರಾಮರ್ಶಿಸಬೇಕು ಎಂದರು.
ಸುದ್ದಿ ಗೋಷ್ಠಿಯಲ್ಲಿ ಗುರುಸ್ವಾಮಿ,ಜಂಭುಗೌಡ,ಪ್ರಭು ಇದ್ದರು.