ದಿ. 8 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


ಬ್ಯಾಡಗಿ,ನ.1: ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 8ರಂದು ಬ್ಯಾಡಗಿ ಪಟ್ಟಣಕ್ಕೆ ಆಗಮಿಸುವರೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕಿಗೆ ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದೆಂದೂ ಕಾಣದಷ್ಟು ಅಭಿವೃದ್ದಿಯನ್ನು ಮಾಡುತ್ತಿವೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನೆಮನೆಗೂ ತೆರಳಿ ಪ್ರಚಾರ ನಡೆಸಿ ಬಿಜೆಪಿ ಸರ್ಕಾರಗಳ ಸಾಧನೆಯನ್ನು ವಿವರಿಸಬೇಕು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ 5ಲಕ್ಷ ರೂಗಳನ್ನು ಘೋಷಣೆ ಮಾಡಿದ ಕೀರ್ತಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ಅದನ್ನು ಮುಂದುವರೆಸಿಕೊಂಡು ಬಂದಿರುವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಹಾನಿ ಸಂತ್ರಸ್ತರಿಗೆ ಸುಸಜ್ಜಿತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಅಲ್ಲದೇ ತಮ್ಮ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1500ಕ್ಕೂ ಹೆಚ್ಚು ಮನೆಗಳಿಗೆ ಪ್ರಸಕ್ತ ವರ್ಷದಲ್ಲಿ ಪರಿಹಾರ ನೀಡಲಾಗಿದೆ. ಬ್ಯಾಡಗಿ ಕ್ಷೇತ್ರಕ್ಕೆ ಪ್ರಸಕ್ತ ವರ್ಷದಲ್ಲಿಯೇ 1350ಕೋಟಿಗೂ ಹೆಚ್ಚು ಅನುದಾನವನ್ನು ತಂದಿರುವೆ ಎಂದರಲ್ಲದೇ, ಕ್ಷೇತ್ರದ ಮಹತ್ವಾಕಾಂಕ್ಷಿ ಯೋಜನೆಯಾದ 409ಕೋಟಿ ವೆಚ್ಚದ ಅಣೂರು ಹಾಗೂ ಬುಡುಪನಹಳ್ಳಿ ಕೆರೆ ತುಂಬಿಸುವ ಯೋಜನೆ, 136 ಕೋಟಿ ವೆಚ್ಚದ ಅಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್‍ಟಿ ಘಟಕದ ಅಧ್ಯಕ್ಷ ಎಸ್.ಎನ್.ಯಮನಕ್ಕನವರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಎನ್.ಎಲ್. ಕಲ್ಲೇಶಪ್ಪ, ತಾಲೂಕಾಧ್ಯಕ್ಷ ಹಾಲೇಶ ಜಾಧವ, ಶಂಕ್ರಣ್ಣ ಮಾತನವರ, ಶೇಖರಗೌಡ ಗೌಡ್ರ, ವಿರೇಂದ್ರ ಶೆಟ್ಟರ, ವಿ.ವಿ.ಹಿರೇಮಠ, ಬಸವರಾಜ ಛತ್ರದ, ಸುರೇಶ ಆಸಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.