ದಿ. 4 ರಿಂದ ದೂರದರ್ಶನದಲ್ಲಿ ಪಾಠಗಳ ಮರುಪ್ರಸಾರ

ಧಾರವಾಡ , ಜ3- ಜನವರಿ 1 ರಿಂದ 10ನೇ ತರಗತಿ ಬೋಧನೆ ಹಾಗೂ 6 ರಿಂದ 9 ನೇ ತರಗತಿಗಳಿಗೆ ‘ವಿದ್ಯಾಗಮ-2’ ಯೋಜನೆ ಆರಂಭಗೊಂಡ ಹಿನ್ನೆಲೆಯಲ್ಲಿ ಕೋವಿಡ್-19ರ ಪ್ರಯುಕ್ತ ಈ ಹಿಂದೆ ಬೆಂಗಳೂರು ದೂರದರ್ಶನ ಪ್ರಸಾರ ಮಾಡಿದ ವೀಡಿಯೋ ಪಾಠಗಳನ್ನು ಜನವರಿ 4 ರಿಂದ ಮರುಪ್ರಸಾರ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಹ ಯೋಗದಲ್ಲಿ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಈಗಾಗಲೇ ಪ್ರಸಾರ ಮಾಡಲಾದ ಸಂವೇದ-ಇ ಕ್ಲಾಸ್ ಕಾರ್ಯಕ್ರಮದ ಅಡಿಯಲ್ಲಿ ಕನ್ನಡ ಮಾಧ್ಯಮದ 8, 9 ಹಾಗೂ 10 ನೇ ತರಗತಿಗಳ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ವೀಡಿಯೋ ಪಾಠಗಳನ್ನು ಜನವರಿ 4 ರಿಂದ 29 ರವರಗೆ ಮರುಪ್ರಸಾರ ಮಾಡಲು ಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 9.30 ರಿಂದ 10.30ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಈ ವೀಡಿಯೋ ಪಾಠಗಳು ಪ್ರಸಾರವಾಗಲಿವೆ.
ಬೆಳಗಾವಿ ವಿಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಹಾವೇರಿ, ಗದಗ, ಧಾರವಾಡ ಕಂದಾಯ ಜಿಲ್ಲೆಗಳ ಹಾಗೂ ಶಿರಸಿ-ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಹಾಗೂ ಡಯಟ್ ಪ್ರಾಚಾರ್ಯರು ತಮ್ಮ ವ್ಯಾಪ್ತಿಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಬಿ.ಆರ್.ಸಿ. ಸಮನ್ವಯಾಧಿಕಾರಿಗಳಿಗೆ, ವಿಷಯ ಪರಿವೀಕ್ಷಕರಿಗೆ, ಡಯಟ್ ಉಪನ್ಯಾಸಕರಿಗೆ, ಪ್ರೌಢ ಶಾಲಾ ಮುಖ್ಯಾಧ್ಯಾಪಕರಿಗೆ ತಿಳಿಸುವ ಮೂಲಕ ವಿದ್ಯಾಗಮ-2 ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ನಿಖರವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.
ವೇಳಾಪಟ್ಟಿ ಬಿಡುಗಡೆ : ಜನವರಿ 4 ರಿಂದ 29 ರವರಗೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿ ಪ್ರಸಾರ ಮಾಡಲಿರುವ ವಿಷಯವಾರು ವೀಡಿಯೋ ಪಾಠಗಳ ಸಮಗ್ರ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದ್ದು, ಈ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಈ ವೀಡಿಯೋ ಪಾಠಗಳ ವೀಕ್ಷಣೆ ಮಾಡುವಂತೆ ವಾತಾವರಣ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಇಲಾಖೆಯ ಎಲ್ಲ ಭಾಗೀದಾರರು ಸ್ಥಳೀಯವಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲು ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಆದೇಶಿಸಿದ್ದಾರೆ.