ದಿ.4 ರಂದು ಹು.ನ.ತಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ


ಹುಬ್ಬಳ್ಳಿ,ಮಾ.2: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಹುಬ್ಬಳ್ಳಿ ನಗರ ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಣಕಲ್ ಕೆರೆ ಹತ್ತಿರದ ಸದ್ಗುರು ಉಣಕಲ್ ಸಿದ್ದಪ್ಪಜ್ಜನವರ ಹೊಸಮಠದ ದೇವಸ್ಥಾನದ ಕಲ್ಯಾಣ ಮಂಟಪದ ಆವರಣದಲ್ಲಿ ಮಾರ್ಚ್ 4 ರಂದು ಆಯೋಜಿಸಲಾಗಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಹುಧಾ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ನೆರವೇರಿಸಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಉಣಕಲ್ ನ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಸಿ.ಬಿ. ಮರಿಗೌಡರ ಆಯ್ಕೆಯಾಗಿದ್ದು, ಅವರನ್ನು ಅಂದು ಮುಂಜಾನೆ 8.30 ಕ್ಕೆ ಉಣಕಲ್ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ವೇದಿಕೆಗೆ ಕರೆದುಕೊಂಡು ಬರಲಾಗುವದು ಎಂದರು.

ಮುಂಜಾನೆ 10 ಗಂಟೆಗೆ ಉದ್ಘಾಟನೆಯನ್ನು ಜಾನಪದ ವಿದ್ವಾಂಸಕರಾದ ಡಾ. ಶಂಭು ಬಳಿಗಾರ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆ ಬಿಡುಗಡೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು.

ತಾಲೂಕು ಕನ್ನಡ ಸಾಹಿತ್ಯ ನಗರದ ಅಧ್ಯಕ್ಷರಾದ ಗುರುಸಿದ್ದಪ್ಪ ಬಡಿಗೇರ್ ಮಾತನಾಡಿ, ಸಮ್ಮೇಳನದಲ್ಲಿ ಚಿಂತನ,ಮಂಥನ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕತೆ ಗೋಷ್ಠಿಗಳು ಜರುಗಲಿದ್ದು, ಕವಿಗೋಷ್ಠಿ ಮತ್ತು ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ ಮತ್ತು ಬಹಿರಂಗ ಅಧಿವೇಶನ ಜರುಗಲಿದ್ದು, ಸಮಾರೋಪ ಸಮಾರಂಭವು ಸಂಜೆ 6 ರಿಂದ 7 ಗಂಟೆಯವರೆಗೆ ಜರುಗಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪೆÇ್ರೀ. ಕೆ.ಎಸ್.ಶರ್ಮಾ ವಹಿಸಲಿದ್ದಾರೆ ಎಂದರು.

ಸಂಜೆ 7 ರಿಂದ 8 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಉದ್ಘಾಟನೆಯನ್ನು ಬೆಳಗಾವಿಯ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ್ ಹೂಗಾರ ನೆರವೇರಿಸುವರು. ಅಧ್ಯಕ್ಷತೆಯನ್ನು ಜಾನಪದ ಸಾಹಿತಿಗಳಾದ ಡಾ. ರಾಮು ಮೂಲಗಿ ವಹಿಸಲಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ಉಮೇಶಗೌಡ ಕೌಜಗೇರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಡಾ. ಲಿಂಗರಾಜ ಅಂಗಡಿ, ಪೆÇ್ರೀ. ಕೆ.ಎಸ್.ಕೌಜಲಗಿ, ಆರ್. ಎಂ.ಗೋಗೆರಿ, ಗಿರಿಜಾ ಚಿಕ್ಕಮಠ, ಡಾ. ಬಿ.ಎಸ್. ಮಾಳವಾಡ ಉಪಸ್ಥಿತರಿದ್ದರು.