ಹುಬ್ಬಳ್ಳಿ,ಅ 30 : ರೈತರ ವಿವಿಧ ಬೇಡಿಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಧಾರವಾಡ ಜಿಲ್ಲಾ ವತಿಯಿಂದ ನವೆಂಬರ್ 3 ರಂದು ಬೆ.11 ಗಂಟೆಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ರೈತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶದ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷರಾದ ವಿವೇಕ ಮೋರೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಬರಗಾಲ ಪರಿಹಾರವಾಗಿ ಪ್ರತಿ ಎಕರೆಗೆ ಇಪ್ಪತ್ತು ಸಾವಿರಗಳಂತೆ ನೇರವಾಗಿ ರೈತರ ಖಾತೆ ಜಮೆ ಮಾಡಬೇಕು, ಜಾನುವಾರುಗಳಿಗೆ ಸೂಕ್ತವಾದ ಮೇವಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು, ಪ್ರತಿ ದಿನ 9 ತಾಸು ನೀರಾವರಿ ಪಂಪಸೆಟ್ ಗಳಿಗೆ ವಿದ್ಯುತ್ ಪೂರೈಸಬೇಕು, ರೈತರ ಹೆಸರಿನಲ್ಲಿರುವ ಎಲ್ಲಾ ಬ್ಯಾಂಕಗಳ ಸಾಲವನ್ನು ಸಂಪೂರ್ಣ ಸಾಲ ಮನ್ನಾ ಮಾಡಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡು ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾಧ್ಯಕ್ಷರಾದ ಮಂಜುನಾಥ ಗೌರಿ, ಮುಖಂಡರಾದ, ಗಂಗಾಧರ ಕಾಸರಗಟ್ಟ, ಪುಟ್ಟಸ್ವಾಮಿ, ರಮೇಶ ಕೊರವಿ, ಮೋಹನ್, ಗುರುನಾಥ ಬೀರನವರ, ಮಹಾದೇವಪ್ಪ ರಾಯನಾಳ ಉಪಸ್ಥಿತರಿದ್ದರು.