ದಿ.28 ರಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಮಾವೇಶ

ಹುಬ್ಬಳ್ಳಿ,ಅ25: ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಧಾರವಾಡ ಜಿಲ್ಲಾ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಅಕ್ಟೋಬರ್ 28 ರಂದು ಮಧ್ಯಾಹ್ನ 1 ಗಂಟೆಗೆ ನಗರದ ಇಂದಿರಾ ಗಾಜಿನ ಮನೆ ಹತ್ತಿರವಿರುವ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷರಾದ ದುರಗಪ್ಪ ಚಿಕ್ಕತುಂಬಳ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಅರ್ಜಿಹಾಕಲು ಯಾವುದೇ ನಿರ್ಬಂಧ ಹೇರಬಾರದು, ಕಲ್ಯಾಣ ಮಂಡಳಿಯ ಯೋಜನೆಗಳಲ್ಲಿ ಹಿರಿಯ ಕಾರ್ಮಿಕರಿಗೆ ಮೊದಲು ಆದ್ಯತೆ ನೀಡಬೇಕು, ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ ವಿತರಿಸಬೇಕು, ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ ಆಗಬೇಕು, ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಿಂಗಳು ಕನಿಷ್ಠ ವೇತನ 26000 ರೂ. ಮತ್ತು ಪಿಂಚಣಿ 10000 ರೂ. ಖಾತ್ರಿಪಡಿಸಬೇಕು, ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು.