ದಿ.27 ರಂದು ವಚನಗಳ ಚಿಂತನಾ ಸಮಾವೇಶ

ಹುಬ್ಬಳ್ಳಿ,ಜು25 : ಶ್ರೀ ವಿಶ್ಚಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಶ್ರೀ ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ ಹಾಗೂ ಜಗದ್ಗುರು ಅಲ್ಲಮಪ್ರಭು ಮಠ, ಸುಕ್ಷೇತ್ರ ತಾ.ಜಿ, ಬೀದರ್ ಇವರ ಸಹಯೋಗದಲ್ಲಿ ತಿಂಥಣಿ ಮೌನೇಶ್ವರರ ವಚನಗಳ ಚಿಂತನಾ ಸಮಾವೇಶ ಹಾಗೂ ವಿಶ್ವಕರ್ಮ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ. 27 ರಂದು ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಶ್ರಿಜ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಡಾ. ಬಿ.ವಿ ಬಡಿಗೇರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರರ ವಚನಗಳ ಪ್ರಕಟಣೆಯ ಚರಿತ್ರೆಯ ಶತಮಾನೋತ್ಸವ ಅಂಗವಾಗಿ ಈ ಸಮಾರಂಭ ನಡೆಯಲಿದ್ದು, ಅಂದು ಬೆ. 9.30 ರಿಂದ 10.30 ರ ವರೆಗೆ ವಿವಿಧ ಕಲಾವಿದರಿಂದ ಮೌನೇಶ್ವರರ ವಚನಗಾಯನ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗಸ್ವಾಮಿಮಠದ ಪ.ಪೂ. ಶ್ರೀ ವೀರೇಂದ್ರ ಮಹಾಸ್ವಾಮಿಗಳು, ಸಾನಿಧ್ಯ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ಶ್ರೀ ರಾಜ ರಾಜೇಶ್ವರಿ ಆಶ್ರಮದ ಶ್ರೀ ಗಣಪತಿ ಮಹಾರಾಜರು, ಬೀದರ್ ಜಿಲ್ಲೆಯ ಚಟ್ನಳಿಯ ಜಗದ್ಗುರು ಅಲ್ಲಮಪ್ರಭು ಮಠದ ಶ್ರೀ ಸಿದ್ಧೇಶ್ವರಾನಂದ ಮಹಾಸ್ವಾಮಿಗಳು, ಚಿಕ್ಕುಂಬಿ ಗ್ರಾಮದ ಶ್ರೀ ಅಭಿನವ ನಾಗಲಿಂಗ ಸ್ವಾಮಿಗಳು, ಶಿರಸಂಗಿ ಶ್ರೀ ವಿಶ್ವಕರ್ಮ ಪ್ರತಿಷ್ಠಾನದ ಅಧ್ಯಕ್ಷ ಮೌನೇಶ್ವರ ಸುಳ್ಳದ, ಡಾ. ಜಿ.ಕೆ. ಬಡಿಗೇರ, ಸಚಿವರಾದ ಶಶಿಕಲಾ ಜೊಲ್ಲೆ, ಶಾಸಕರಾದ ಆನಂದ ಮಾಮನಿ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಪಿ.ಮಾಯಾಚಾರ, ಸಿದ್ದೇಶ್ವರನಂದ ಸ್ವಾಮಿಗಳು ಉಪಸ್ಥಿತರಿದ್ದರು.