ದಿ.24 ರಂದು ನವಲಗುಂದಕ್ಕೆ ಸಿಎಂ: ಸಚಿವರಿಂದ ಸ್ಥಳ ಪರಿಶೀಲನೆ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ19 : ಇದೆ 24 ರಂದು ವಿವಿಧ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಲಿದ್ದು
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಪಟ್ಟಣದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣ ಸೇರಿದಂತೆ ವಿವಿಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪುರಸಭೆಯಿಂದ ನೂತನವಾಗಿ ನಿರ್ಮಿಸುತ್ತಿರುವ ಆಶ್ರಯ ಮನೆಗಳ ಕಾಮಗಾರಿ ಹಾಗೂ ಮುಖ್ಯ ಮಂತ್ರಿಗಳ ಹೆಲಿಪ್ಯಾಡ್ ತಂಗುವು ಸ್ಥಳ ಪರಿಶೀಲನೆ, ನಂತರ ಇಬ್ರಾಹಿಂಪುರ ರಸ್ತೆಯಲ್ಲಿರುವ ಚಕ್ಕಡಿ ರಸ್ತೆ ವೀಕ್ಷಣೆ ಮಾಡಿದರು.

ಪಟ್ಟಣದ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ನವಲಗುಂದ ಹಾಗೂ ಅಣ್ಣಿಗೇರಿಯ ತಾಲೂಕಿನ ಅಧಿಕಾರಿಗಳ ಸಭೆಕರೆದು ಕಾಮಗಾರಿಗಳ ಕುರಿತು ಸಭೆ ನಡೆಸಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ತಾಲ್ಲೂಕು ಕೇಂದ್ರಕ್ಕೆ ಆಗಮಿಸುವುದರಿಂದ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆಯಲ್ಲಿ ಜಿಲ್ಲಾಧಿಕಾರಿ ದಿವ್ಯಾಪ್ರಭು, ಶಾಸಕ ಎನ್. ಎಚ್. ಕೋನರಡ್ಡಿ, ವಿನೋದ ಅಸೂಟಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣವರ, ಎಸ್ಪಿ ಗೋಪಾಲ್ ಬ್ಯಾಕೋಡ್, ಸಿಪಿಐ ರವಿ ಕಪ್ಪತ್ತನವರ, ಪಿಎಸ್‍ಐ ಜನಾರ್ಧನ್ ಭಟ್ರಳ್ಳಿ, ಸೇರಿದಂತೆ ಎಲ್ಲ ಇಲಾಖೆಯ ಸಿಬ್ಬಂದಿಗಳು, ಪುರಸಭೆ ಸದ್ಯಸರು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.