ದಿ.21 ರಂದು ಬೃಹತ್ ರೈತ ಸಮಾವೇಶ

ನವಲಗುಂದ,ಜು19 : ಮಹಾದಾಯಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರೈತರ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಜು-21 ರಂದು ಹುತಾತ್ಮ ದಿನಾಚರಣೆ ದಿನದಂದು ಆಮರಣ ಉಪವಾಸ ಹಾಗೂ ಬೃಹತ್ ರೈತ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ಸಮಗ್ರ ಜಾತ್ಯಾತೀತ ಪಕ್ಷಾತೀತ ಮಹಾದಾಯಿ ಕಳಸಾ ಬಂಡೂರಿ ರೈತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಅಧ್ಯಕ್ಷ ಲೋಕನಾಥ ಹೆಬಸೂರ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2015 ಜು-21 ರಂದು ಬೃಹತ್ ಪ್ರತಿಭಟನೆ ಮೂಲಕ ಆಗಮಿಸಿ ಬಸಪ್ಪ ಲಕ್ಕುಂಡಿ ಇವರ ವೀರಗಲ್ಲಿಗೆ ಮಾರ್ಲಾಪಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿ ಸರತಿ ಆಮರಣ ಉಪವಾಸವನ್ನು ಹಮ್ಮಿಕೊಳ್ಳುತ್ತೇನೆ. ರೈತರ ದಶಕಗಳಿಂದ ನೆನೆಗುದಿಗೆ ಬಿದ್ದ ರೈತರ ಜಲ್ವಂತ ಮಹಾದಾಯಿ ಕಳಸಾ ಬಂಡೂರಿ ಯೋಜನೆಗೆ ಕಾಯಕಲ್ಪ ಸಿಗುವವರೆಗೂ ಆಮರಣ ಉಪವಾಸ ಹಿಂದಿಗೆಯುವುದಿಲ್ಲವೆಂದು ಹೇಳಿದರು. ಆದ್ದರಿಂದ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಕರೆ ನೀಡಿದರು.
ಈ ಹೋರಾಟ ಯಾರ ಮನೆಯ ಸ್ವತ್ತು ಅಲ್ಲ ಎಲ್ಲರೂ ಒಂದಾಗಿ ಹೋರಾಟ ಮಾಡಿದರೆ ಎಲ್ಲ ರಾಜಕೀಯ ನಾಯಕರುಗಳು ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಇದಕ್ಕೂ ಮುಂಚೆ ರೈತ ಸಂಘಟನೆಗಳಲ್ಲಿ ಯಾವುದೇ ಮನಸ್ತಾಪ ಇದ್ದರು ಅದನ್ನು ಮರೆತು ಒಂದಾಗಿ ರೈತ ಹೋರಾಟಕ್ಕೆ ಕೈ ಜೋಡಿಸೋಣವೆಂದು ರೈತ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಎಲ್ಲ ಸಂಘಟನೆಗಳಿಗೂ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸೇನಾ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಮನಗೌಡ ಪಾಟೀಲ, ರಾಜ್ಯ ಸಂಚಾಲಕ ವೀರಣ್ಣ ಸೊಪ್ಪಿ, ರೈತ ಮುಖಂಡರಾದ ಡಿ.ಎಮ್.ಶಲವಡಿ, ರಮೇಶ ನವಲಗುಂದ, ಪಿ.ಎಮ್.ಬೀಳಗಿ, ಆರ್.ಎಮ್.ನಾಯ್ಕರ, ದತ್ತಾತ್ರೇಯ ಹೆಬಸೂರ, ವೀರಣ್ಣ ನಿಡವಣೆ, ಬಸವರಾಜ ಶಿರಕೋಳ, ಪ್ರಕಾಶ ಶಿರಹಟ್ಟಿ, ದೇವೇಂದ್ರಪ್ಪ ಹಡಪದ ಇತರರು ಇದ್ದರು.