ದಿ. 20,21 ರಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ಸಲೀಂ ಅಹ್ಮದ್


ಹುಬ್ಬಳ್ಳಿ,ಮಾ.18: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 20 ಹಾಗೂ 21 ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲ ಪಟ್ಟಿಯಲ್ಲಿ 120 ಅಥವಾ 130 ಅಭ್ಯರ್ಥಿಗಳ ಹೆಸರು ಇರಲಿದ್ದು, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎಂದು ಸ್ಪಷ್ಟಪಡಿಸಿದರು.
ಯುವ ಕ್ರಾಂತಿ ಸಮಾವೇಶ: ಕುಂದಾನಗರಿ ಬೆಳಗಾವಿಯಲ್ಲಿ ಮಾರ್ಚ್ 20 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಯುವ ಕ್ರಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಅಂದಿನ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಯುವಕರು ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ರಾಜ್ಯದ ಜನತೆಗೆ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗವನ್ನು ಕೊಡುಗೆಯಾಗಿ ನೀಡಿರುವ ಬಿಜೆಪಿಗರು ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಅವರು ಟೀಕಾ ಪ್ರಹಾರ ಮಾಡಿದರು.
ಬಿಜೆಪಿಯವರು ರಾಜ್ಯದಲ್ಲಿ ಕ್ಷಮೆಯಾತ್ರೆ ನಡೆಸಬೇಕು. ಶೇ. 40 ರಷ್ಟು ಕಮೀಷನ್ ಪಡೆದಿದ್ದಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಯುವಕರಿಗೆ ಉದ್ಯೋಗ ನೀಡದೇ ಇರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಅವರು ಖಾರವಾಗಿ ನುಡಿದರು.
ದುರ್ದೈವ:
ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಟ್ಟು 23000 ರೌಡಿ ಶೀಟರಗಳಿಗೆ ಕ್ಲೀನ್ ಚೀಟ್ ನೀಡಿದೆ. ರಾಜ್ಯಕ್ಕೆ ಮೋದಿಯವರು ಭೇಟಿ ನೀಡಿದ ಸಂದರ್ಭದಲ್ಲಿ ರೌಡಿ ಶೀಟರ್ ಫೈಟರ್ ರವಿಗೆ ಕೈ ಮುಗಿದು ನಮಸ್ಕರಿಸಿದ್ದು ದುರ್ದೈವ, ಫೈಟರ್ ರವಿಯನ್ನು ಪ್ರಧಾನಿ ಬಳಿ ಬಿಟ್ಟಿದ್ದು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಲೀಂ ಅಹ್ಮದ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಮುಖಂಡರಾದ ಅನಿಲಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಉಪಸ್ಥಿತರಿದ್ದರು.