ದಿ.19,20 ರಂದು ಸುವರ್ಣ ಮಹೋತ್ಸವ


ಧಾರವಾಡ,ಮಾ.18: ತಾಲೂಕಿನ ಉಪ್ಪಿನಬೆಟಗೇರಿಯ ಗ್ರಾಮದಲ್ಲಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭವನ್ನು ಮಾ.19 ಮತ್ತು 20 ರಂದು ಶಾಲೆಯ ಆವರಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು
ಶತಮಾನೋತ್ತರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.
ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,157 ವಸಂತ ಪೂರೈಸಿರುವ ಸರಕಾರಿ ಶಾಲೆಯು ಅಕ್ಷರ ಜ್ಞಾನದ ಜತೆಗೆ ಲಕ್ಷಾಂತರ ಜನರ ಬದುಕು ನಿರ್ಮಿಸಿ, ಈಗಲೂ ಜ್ಞಾನ ದಾಸೋಹ ಮಾಡುತ್ತಿದ್ದು, ಇದೀಗ ಶತಮಾನೋತ್ತರ ಸುವರ್ಣ ಸಂಭ್ರಮದಲ್ಲಿದೆ. ಕನ್ನಡದ ಪ್ರಥಮ ಕಾದಂಬರಿಕಾರ `ಗಳಗನಾಥ’ ಎಂಬ ಕಾವ್ಯ ನಾಮದಿಂದ ಖ್ಯಾತರಾಗಿದ್ದ ಸಾಹಿತಿ ವೆಂಕಟೇಶ ತಿರಕೋ ಕುಲಕರ್ಣಿ 1889 ರಲ್ಲಿ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ತಂದೆ ಗುರಪ್ಪ ಹಳಕಟ್ಟಿ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಈ ಶಾಲೆಯ ಹೆಮ್ಮೆಯಾಗಿದೆ. ಸದ್ಯ ಈ ಶತಮಾನೋತ್ತರ ಸುವರ್ಣ
ಸಂಭ್ರಮವನ್ನು ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ಇಡೀ ಗ್ರಾಮವೇ ಕೈ ಜೋಡಿಸಿದೆ. ಗುಡ್ಡದ ಮೇಲೆ ಇರುವ ಕಾರಣ ಗುಡ್ಡದ ಶಾಲೆಯೆಂಬ ಹೆಣೆಪಟ್ಟಿ ಪಡೆದಿರುವ ಈ ಶಾಲೆಯಿಂದ ಈಗ ಇಡೀ ಗ್ರಾಮದಲ್ಲಿಯೇ ಸಂಭ್ರಮ ಮನೆ ಮಾಡಿದೆ. ಕನ್ನಡ ಶಾಲೆಯ ಹಬ್ಬವಾಗಿ ಮಾರ್ಪಟ್ಟು, ಇಡೀ ಗ್ರಾಮವೇ ಈ ಹಬ್ಬದ ಆಚರಣೆಯ ತಯಾರಿ ಜೋರಾಗಿಯೇ ಸಾಗಿದೆ ಎಂದರು.
ಮಾ.19 ರಂದು ಬೆಳಿಗ್ಗೆ 8:00 ಗಂಟೆಗೆ ಶಾಲಾ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷರಾದ ಸಾಯಿರಾಬಾನು ನೆರವೇರಿಸಲಿದ್ದಾರೆ. ಭುವನೇಶ್ವರಿ ಮೆರವಣಿಗೆಗೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ವೀರಣ್ಣ ಪರಾಂಡೆ ಚಾಲನೆ ನೀಡಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ಗಣ್ಯರು, ಎಸ್‍ಡಿಎಂಸಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಬೆಳಿಗ್ಗೆ 11:00 ಗಂಟೆಗೆ ಶತಮಾನೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಪ್ರಜ್ವಲನಗೊಳಿಸಲಿದ್ದು, ಕೇಂದ್ರ ಸಂಸದೀಯ ವ್ಯವಹಾರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ್ದಾರೆ ಎಂದರು.

ಅಂದು ಮಧ್ಯಾಹ್ನ 3:00 ಗಂಟೆಗೆ ಕಲಿತ ಶಾಲೆಗೆ ನಮನಗಳು: ನೆನೆ ನೆನೆ ಆ ದಿನ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಜ್ಯೋತಿಷಿ ಮಹಾದೇವಪ್ಪ ಅಷ್ಟಗಿ ಸಾನಿಧ್ಯದಲ್ಲಿ ಚಿಕ್ಕೋಡಿಯ ಸೋಮಶೇಖರ ಜುಟ್ಟಲ ಉದ್ಘಾಟಿಸಲಿದ್ದಾರೆ. ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಹಾದೇವ ಕೂಡವಕ್ಕಲಿಗೇರ ಅಧ್ಯಕ್ಷತೆ ವಹಿಸಲಿದ್ದು, ಕೆಎಸ್‍ಆರ್‍ಟಿಸಿ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಬಸಲಿಂಗಪ್ಪ ಬೀಡಿ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಸಂಜೆ 5:00 ಗಂಟೆಗೆ ಉಪ್ಪಿನಬೆಟಗೇರಿ ಗ್ರಾಮದ ಹಿರಿಮೆ-ಗರಿಮೆ : ಚಿಂತನಾ ಗೋಷ್ಠಿ ಜರುಗಲಿದೆ.
ಮಾ.20 ರಂದು ಬೆಳಿಗ್ಗೆ 10:00 ಗಂಟೆಗೆ ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಗುರು ವಂದನೆ ಕಾರ್ಯಕ್ರಮ ನೆರವೇರಲಿದೆ. ಬೆಳಗಾವಿಯ ಇಂಜನೀಯರ್ ಶ್ರೀಶೈಲ ಪುಡಕಲಕಟ್ಟಿ ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವ ಸನ್ಮಾನ ನೆರವೇರಲಿದೆ. ಇದಲ್ಲದೇ ಎಸ್‍ಜಿವಿ ಕಾಲೇಜು ಹಾಗೂ ಪ್ರೌಢಶಾಲೆಯಿಂದ ಸೇವಾ
ನಿವೃತ್ತಿಯಾದ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಸೇರಿದಂತೆ ಗಣ್ಯರಿಗೆ ವಿಶೇಷ ಗೌರವ ಸನ್ಮಾನ ಜರುಗಲಿದೆ. ಅಂದು ಮಧ್ಯಾಹ್ನ 3:00 ಗಂಟೆಗೆ ಸಮಾರಂಭದ ಯಶಸ್ಸಿಗೆ ಕೈ ಜೋಡಿಸಿದ ಮಹನೀಯರಿಗೆ ಹಾಗೂ ಸೈನಿಕರಿಗೆ ಸನ್ಮಾನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ವೀರಣ್ಣ ಪರಾಂಡೆ, ಕೋಶಾಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಗೌರವಾಧ್ಯಕ್ಷ ಚನಬಸಪ್ಪ ಮಸೂತಿ, ಉಪಾಧ್ಯಕ್ಷರಾದ ಅಶೋಕ ಮಸೂತಿ, ಗಿರೀಶ ಪದಕಿ, ಮಂಜುನಾಥ ಸಂಕಣ್ಣನವರ, ರವೀಂದ್ರ ಯಲಿಗಾರ, ಪ್ರಧಾನ ಕಾರ್ಯದರ್ಶಿಗಳಾದ ಗುರು ತಿಗಡಿ, ಕಾಶಪ್ಪ ದೊಡವಾಡ ಸೇರಿದಂತೆ ಪದಾಧಿಕಾರಿಗಳು ಇದ್ದರು.