
ಹುಬ್ಬಳ್ಳಿ,ಮಾ.13: ಕಮಾಂಡರ್ ಅಶೋಕ ರಾವತ್, ವೀರೇಂದ್ರ ಸಿಂಗ್ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಮೂವತ್ತು ವರ್ಷಗಳಿಂದ ಕೆಲಸ ಮಾಡಿದ ಇಪಿಎಸ್ 95 ನಿವೃತ್ತ ಉದ್ಯೋಗಿಗಳು ಹೆಚ್ಚಿನ ಪಿಂಚಣಿ ನೀಡುವಂತೆ ಆಗ್ರಹಿಸಿ ಮಾರ್ಚ್ 15 ರಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಇಪಿಎಸ್ ರಾಷ್ಟ್ರೀಯ ಸಂಘರ್ಷ ಸಮಿತಿ ಸದಸ್ಯ ವಿಲಾಸ ಕುಲಕರ್ಣಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 30-35 ವರ್ಷಗಳಿಂದ ಸೇವೆ ಸಲ್ಲಿಸಿದ ನಮಗೆ ತಿಂಗಳಿಗೆ 2000 ರೂ. ಪಿಂಚಣಿ ನೀಡಲಾಗುತ್ತಿರುವುದು ಖಂಡನೀಯ ಎಂದರು.
ನಾವು ಎನ್ ಎಸಿ ನಾಯಕತ್ವದಲ್ಲಿ ನಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ. ಎರಡು ಬಾರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೇವೆ. ಇಷ್ಟಾದರೂ ನಮ್ಮ ಬೇಡಿಕೆ ಈಡೇರಿಲ್ಲ ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ.
ಕನಿಷ್ಠ 7500 ರೂ. ಪಿಂಚಣಿ ನೀಡಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡಬೇಕು. ಪಿಂಚಣಿದಾರ ಮೃತಪಟ್ಟ ಬಳಿಕ ಕುಟುಂಬಸ್ಥರಿಗೆ ಇದೀಗ ಶೇ.50 ರಷ್ಟು ನೀಡಲಾಗುತ್ತಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಪಿಂಚಣಿ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.
ಸಂಜೀವ ಕೌಜಲಗಿ, ವೆಂಕಟೇಶ ಮುರ್ಡೇಶ್ವರ, ರವೀಂದ್ರ ರಾಮದುರ್ಗ ಇದ್ದರು.