
ರಾಣೇಬೆನ್ನೂರು, ಏ3: ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ವರ್ಗೀಕರಣವನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ ರಾಜ್ಯ ಸರ್ಕಾರದ ಕ್ರಮ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಿದ್ದು ಕೇಂದ್ರ ಸರಕಾರವು ಅಂಗೀಕಾರ ಮಾಡಬಾರದು ಎಂದು ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಹಾಗೂ ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದಿನ ಬಿಜೆಪಿ ಸರಕಾರ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜನಾಂಗಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡುವ ಸಂಚು ರೂಪಿಸಿ ಸಾಕಷ್ಟು ಅನ್ಯಾಯ ಮಾಡಿದ್ದರೂ ಕೂಡಾ ಬಂಜಾರ ಸಮಾಜ ಏನು ಮಾಡಿದರೂ ಒಪ್ಪಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಹಿಂದಿನ ರಾಜ್ಯದಲ್ಲಿನ ಬಿಜೆಪಿ ಸರಕಾರವು ನಮ್ಮ ಎಲ್ಲ ಸಮುದಾಯಗಳ ಹಿತಾಸಕ್ತಿ ಕಡೆಗಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪನವರು ಎಸ್.ಸಿ ಒಳಪಂಗಡಗಳಲ್ಲಿಯೇ ವಿಷಬೀಜ ಭಿತ್ತಿ ರಾಜಕೀಯ ಲಾಭ ಪಡೆಯುತ್ತಾ ತಮ್ಮ ಸಮುದಾಯವನ್ನು ಗಟ್ಟಿಕೊಳಿಸುತ್ತ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ ಎಂದು ಲಮಾಣಿ ಗಂಭೀರವಾಗಿ ಆರೋಪಿಸಿದರು.
ಅನ್ಯಾಯಕ್ಕೆ ಒಳಗಾದ ಎಲ್ಲ ಸಮುದಾಯದವರು 2020 ರಲ್ಲಿ ರಾಜ್ಯಾಧ್ಯಂತ ಹೋರಾಟ ಮಾಡಿ 17 ಲಕ್ಷ ಜನರು ಈ ವರದಿಯನ್ನು ವಿರೋಧಿಸಿ ಪತ್ರ ಚಳುವಳಿ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ರಾಜ್ಯಾದ್ಯಂತ ಸುಮಾರು 10 ಲಕ್ಷಕ್ಕೂ ಜನ ಸೇರಿ ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು ಜಾರಿಗೊಳಿಸಬಾರದು ಎಂದು ಅಂದಿನ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದ್ದರೂ ಕೂಡಾ ಸರ್ಕಾರ ಈ ರೀತಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ ಜೊತೆಗೆ ಮಾಜಿ ಸಿಎಂ ಬೊಮ್ಮಾಯಿಯವರ ನಡೆಯನ್ನು ಖಂಡಿಸಿ ಏಪ್ರೀಲ್ 15 ರಂದು ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಡಿ. ನಾಯಕ ನೇತೃತ್ವದಲ್ಲಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಕಾರಣ ಬಂಜಾರ ಸಮುದಾಯದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.