ದಿ.13 ರಂದು ಪ್ರಶಸ್ತಿ ಪ್ರದಾನ

ಶಿರಹಟ್ಟಿ,ಏ10: ಪಂಡಿತ ಪುಟ್ಟರಾಜ ಕವಿಗವಾಯಿಗಳವರ ನೇತೃತ್ವದಲ್ಲಿ ಶ್ರೀಪಂಡಿತ ಪಂಚಾಕ್ಷರ ಗವಾಯಿಗಳವರ ಕೃಪಾರ್ಶಿವಾದದಲ್ಲಿ ಆರಂಭವಾದ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ ಸ್ಥಾಪನೆಯಾಗಿ 86 ವರ್ಷಗಳು ಗತಿಸಿದ್ದರಿಂದ 86ನೇ ವಾರ್ಷಿಕೋತ್ಸವ ಹಾಗೂ ಮತ್ತೊಮ್ಮೆ ಬಾ ಮುತ್ತೈದೆಯಾಗಿ ನಾಟಕದ 51ನೇ ಪ್ರಯೋಗದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿನ ಅಳವಂಡಿಯವರ ಜಾಗೆಯಲ್ಲಿನಿರ್ಮಿಸಲಾಗಿರುವ ಭವ್ಯ ರಂಗ ಮಂದಿರದಲ್ಲಿ ದಿ.13 ರಂದು ಮುಂಜಾನೆ 10 ಗಂಟೆಗೆ ಕೈಗೊಳ್ಳಲಾಗಿದೆ ಎಂದು ಸಂಘದ ಮ್ಯಾನೇಜರ ಮಹಾದೇವ ಗುಟ್ಲಿ ಹೇಳಿದರು.
ಅವರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಂಡಿತ ಕವಿ ಗವಾಯಿಗಳವರು ನಾಟಕ ಪ್ರಿಯರಾಗಿದ್ದರು, ಹಲವಾರು ನಾಟಕಗಳನ್ನು ರಚಿಸಿದವರಾಗಿದ್ದು, ಪಂಡಿತ ಪಂಚಾಕ್ಷರ ಗವಾಯಿಗಳವರ ಅಪ್ಪಣೆಹಾಗೂ ಅದೇಶದಂತೆ ನಾಟ್ಯಸಂಘದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ 85 ವರ್ಷಗಳಿಂದ ನಿರ್ವಹಿಸುತ್ತಾ ಬರಲಾಗಿದೆ. ನಾಟಕ ಕಂಪನಿಯಲ್ಲಿ ಒಬ್ಬರು ಸ್ತ್ರಿಯರು ಇಲ್ಲದೇ ಅತ್ಯಂತ ಯಶಸ್ವಿ ಪ್ರಯೋಗಗಳನ್ನು ಜರುಗಿತ್ತಾ ಬಂದಿದೆ. ಹೇಮರೆಡ್ಡಿಮಲ್ಲಮ್ಮ ನವಲಗುಂದ ನಾಗಲೀಲೆ, ಅಕ್ಕಮಹಾದೇವಿ, ಬಂಜೆತೊಟ್ಟಿಲು ಮುಂತಾದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಗೊಳಿಸಿ ಕೀರ್ತಿಯನ್ನು ಹೊಂದಿದ ಶ್ರೇಯಸ್ಸ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದಲ್ಲಿ ಸುಮಾರು 50 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿರುವ ವೇ,ರುದ್ರಾರಾದ್ಯ ಶಾಸ್ತ್ರಿಗಳು, ಸಿದ್ದಪ್ಪ ಮಾಸ್ತರ, ಬಸವಣ್ಣಯ್ಯ ಶಾಸ್ತ್ರಿಗಳು ಹಿರೇಮಠ, ರೇವಣಸಿದ್ದಯ್ಯಸ್ವಾಮಿ ಹೊಸೂರಮಠ, ವಿರುಪಾಕ್ಷಯ್ಯ ಹಿರೇಕಲ್ಲಮಠ ಇವರಿಗೆ ರಂಗಸಿರಿ ಗೌರವ ಪ್ರಶಸ್ತಿ ಹಾಗೂ 5000 ಗೌರವ ಧನ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಜಿಗಳು, ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಮಹಾಸ್ವಾಮಿಜಿಗಳು, ಅಧ್ಯಕ್ಷತೆಯನ್ನು ರಾಜಗುರು ಗುರುಸ್ವಾಮಿ ಯವರು ಮತ್ತು ಗ್ರಾಮ ಅನೇಕ ಗಣ್ಯರು ವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನೂರುದ್ದೀನ ಮಂಗಳೂರ, ವಿರೇಶ ಶಶಿಮಠ, ಮಾಂತಯ್ಯ ಶಶಿಮಠ ಉಪಸ್ಥಿತರಿದ್ದರು.