ದಿ.11 ರಂದು ಜಿಲ್ಲಾಮಟ್ಟದ ಎಸ್.ಟಿ. ಸಮಾವೇಶ


ಬ್ಯಾಡಗಿ,ಮಾ.8: ರೈತರಿಗೆ ತಮ್ಮ ಕೃಷಿ ವೆಚ್ಚವನ್ನು ಕಡಿಮೆಗೊಳಿಸಿ ಹೆಚ್ಚಿನ ಪ್ರಮಾಣದ ಲಾಭವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ತಾಲೂಕಾ ಪಂಚಾಯತಿಯ ಆವರಣದಲ್ಲಿ ಕೃಷಿ ಇಲಾಖೆಯು ಆಯೋಜಿಸಿದ್ದ ಪ್ರಸಕ್ತ ಸಾಲಿನ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಅಭ್ಯುದಯಕ್ಕೆ ಬದ್ಧವಾಗಿದ್ದು, ವಿಶೇಷ ಯೋಜನೆಗಳ ಮೂಲಕ ರೈತರ ಮತ್ತು ಕೃಷಿ ಕೂಲಿ ಕಾರ್ಮಿಕರ ಅಭಿವೃದ್ಧಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದು ಅನುದಾನ, ಶಿಷ್ಯವೇತನ, ಪರಿಹಾರಗಳ ಮೂಲಕವೂ ರೈತರಿಗೆ ಶಕ್ತಿ ತುಂಬಲಾಗುತ್ತಿದೆ. ಕೇಂದ್ರದ ಕಿಸಾನ್ ಸಮ್ಮಾನ ಸೇರಿದಂತೆ ಈಗ ರೈತ ಶಕ್ತಿ ಎಂಬ ನೂತನ ಯೋಜನೆಯೊಂದಿಗೆ ಕೃಷಿ ಮತ್ತು ಕೃಷಿಕರ ಅಭಿವೃದ್ಧಿಗೆ ಸರಕಾರವು ಶ್ರಮಿಸುತ್ತಿದೆ. ನದಿ ಮೂಲಗಳಿಂದ ಕೆರೆಕಟ್ಟೆಗಳನ್ನು ತುಂಬಿಸುವುದು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ರೈತರಿಗೆ ತಮ್ಮ ಜಮೀನುಗಳಿಗೆ ಹೋಗುವ ರಸ್ತೆ ಹಾಗೂ ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಲಿದ್ದು, ಈಗಾಗಲೇ ಕ್ಷೇತ್ರದ 12ಗ್ರಾಪಂ ವ್ಯಾಪ್ತಿಯಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ ಎಂದರು.
ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಸರ್ಕಾರ ಕಡಿಮೆ ಬಿಡ್ ಟೆಂಡರದಾರರ ಮೂಲಕ ರೈತರಿಗೆ ಕಳಪೆ ಗುಣಮಟ್ಟದ ಬೀಜ ಮತ್ತು ಗೊಬ್ಬರ ವಿತರಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ರೈತರು ಯೋಜನೆಗಳ ಕುರಿತು ಮಾಹಿತಿ ಇಲ್ಲದೇ ಪರದಾಡುವಂತಾಗಿದೆ. ರೈತರು ಎಲ್ಲೆಡೆ ರೈತ ಉತ್ಪಾದಕ ಕಂಪನಿಗಳನ್ನು ರಚಿಸಿಕೊಳ್ಳುವ ಮೂಲಕ ದಲ್ಲಾಳಿಗಳ ಹಾವಳಿಯಿಂದ ತಪ್ಪಿಸಿಕೊಂಡು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳಬಹುದು. ಸರ್ಕಾರವು ಸಹ ರೈತ ಉತ್ಪಾದಕ ಕಂಪನಿಗಳ ಮೂಲಕ ತನ್ನ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಜೆ.ಶಾಂತಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಷ್ಠಾನಗೊಂಡಿರುವ ಕೃಷಿ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪಿಕಾರ್ಡ್ ಬ್ಯಾಂಕ್ ಸದಸ್ಯ ಸುರೇಶ ಯತ್ನಳ್ಳಿ ಹಾಗೂ ತರಳುಬಾಳು ರೈತ ಉತ್ಪಾದಕ ಕಂಪನಿಯ ರೇವಣಸಿದ್ದನಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಯೋಜನಾ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಸದಸ್ಯರಾದ ಚಂದ್ರಣ್ಣ ಶೆಟ್ಟರ, ಕವಿತಾ ಸೊಪ್ಪಿನಮಠ, ಗಾಯತ್ರಿ ರಾಯ್ಕರ್, ಶೈಲಾ ಅಕ್ಕಿ, ವಿವಿಧ ಸಮಿತಿಗಳ ಸದಸ್ಯರಾದ ವೀರೇಂದ್ರ ಶೆಟ್ಟರ, ಶೇಖರಗೌಡ ಗೌಡ್ರ, ಸುರೇಶ ಕಳ್ಳಿಮನಿ, ಸಿದ್ಧಯ್ಯ ಪಾಟೀಲ, ಸುರೇಶ ಉದ್ಯೋಗಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆ.ಬಿ.ಹಿರೇಹಾಳ ಸ್ವಾಗತಿಸಿದರು. ಪವಿತ್ರಾ ಎಂ. ಕಾರ್ಯಕ್ರಮ ನಿರೂಪಿಸಿದರು. ಎಸ್.ಪಿ.ಮರಬಸಣ್ಣನವರ ವಂದಿಸಿದರು.