ದಿ.೯ರಂದು ನಷ್ಟವಾದ ಬೆಳೆ ಸಮೇತ ಹೆದ್ದಾರಿ ರಸ್ತೆ ಬಂದ್:ಪ್ರತಿಭಟನೆ

ಮುಳಬಾಗಿಲು-ಆ,೭- ಕಿಸಾನ್ ಸನ್ಮಾನ್ ಯೋಜನೆ ಹಣ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯುವ ಜೊತೆಗೆ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಬಿಂಗಿರೋಗದಿಂದ ನಷ್ಟವಾಗಿರುವ ಪ್ರತಿ ಎಕರೆ ಟೆಮೋಟೋಗೆ ೫ ಲಕ್ಷ ಪರಿಹಾರ ನೀಡುವಂತೆ ಕೃಷಿ ಮಂತ್ರಿಗಳನ್ನು ಒತ್ತಾಯಿಸಿ ಆ-೯ ರ ಬುಧವಾರ ನಷ್ಟ ಬೆಳೆ ಸಮೇತ ರಾಜ್ಯ ಹೆದ್ದಾರಿ ವಡ್ಡಹಳ್ಳಿ ರಸ್ತೆ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು. .
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌq ಮಾತನಾಡಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ೪ ಸಾವಿರ ಪರಿಹಾರದ ಹಣವನ್ನು ಸ್ಥಗಿತಗೊಳಿಸುವ ಮೂಲಕ ಗ್ಯಾರೆಂಟಿಗಳ ನೆಪದಲ್ಲಿ ರೈತ ವಿರೊಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ೬ ಸಾವಿರ, ರಾಜ್ಯ ಸರ್ಕಾರ ೪ ಸಾವಿರ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತಿದ್ದ ಯೋಜನೆಯನ್ನು ಏಕಾಏಕಿ ರಾಜ್ಯ ಸರ್ಕಾರ ಸ್ಥಗಿತಗೊಳಿಸಿರುವ ಮೂಲಕ ಸಂಕಷ್ಟದಲ್ಲಿರುವ ರೈತರ ಬೆನ್ನುಮೂಳೆ ಮುರಿಯುತ್ತಿದೆ ಎಂದು ಆರೋಪ ಮಾಡಿದರು.
ರಾಜ್ಯ ಪ್ರ.ಕಾರ್ಯದರ್ಶಿ ಪಾರುಕ್ ಪಾಷ ಮಾತನಾಡಿ ಸತತವಾಗಿ ಜಿಲ್ಲೆಯಲ್ಲಿ ೫ ವರ್ಷಗಳಿಂದ ಕೃಷಿ ವಾಣಿಜ್ಯ ಬೆಳೆಗಳಿಗೆ ಬಾಧಿಸುತ್ತಿರುವ ಅಂಗಮಾರಿ, ಊಜಿ, ರೋಜ್ ಮತ್ತಿತರ ರೋಗಗಳ ನಿಯಂತ್ರಣಕ್ಕೆ ಬಾರದೆ ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಸರ್ಕಾರ ರೈತರಿಗೆ ಕೊಡುವಂತಹ ಚಿಕ್ಕ ಚಿಕ್ಕ ಅನುದಾನವನ್ನು ಕಡಿತಗೊಳಿಸುವ ಮೂಲಕ ಕೃಷಿ ಕ್ಷೇತ್ರ ಮರಣ ಶಾಸನವನ್ನು ಬರೆಯುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಕ್ಷೇತ್ರವನ್ನು ಅಡ ಇಟ್ಟಿದ್ದಾರೆಂದು ಕಿಡಿಕಾರಿದರು.
ಜಿಲ್ಲಾದ್ಯಂತ ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರಗಳ ನಿಯಂತ್ರಣ ವಿಲ್ಲದೆ ಗಲ್ಲಿಗೊಂದು ಬಹುರಾಷ್ಟ್ರೀಯ ಹೊರರಾಜ್ಯದ ೩೮೦೦ ಕಂಪನಿಗಳು ೧೨೦೦ ಮಾರಾಟ ಮಳಿಗೆಗಳು ೪೮೦ ವಿತರಕರು ಇದ್ದರೂ ಸಹ ಟೆಮೋಟೋಗೆ ಬಾದಿಸುತ್ತಿರುವ ಬಿಂಗಿ ರೋಗಕ್ಕೆ ಗುಣಮಟ್ಟದ ಔಷಧಿ ಕೊಡದ ಕಂಪನಿಗಳ ಔಷಧಿ ಏಕೆ ಮಾರಾಟ ಮಾಡಬೇಕು. ರೋಗ ನಿಯಂತ್ರಣಕ್ಕೆ ಬಾರದೆ ಇದ್ದರೆ ಅಂತಹ ಕಂಪನಿಗಳು ಔಷಧಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಜಿ-೨, ಜಿ-೩, ಜಿ-೫, ಫಾರಂಗಳನ್ನು ಏಕೆ ನೀಡಬೇಕೆಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಂತ ಬಿಂಗಿರೋಗದಿಂದ ನಷ್ಟವಾಗಿರುವ ಟೆಮೊಟೋ ಬೆಳೆಗಾರರ ರಕ್ಷಣೆಗೆ ಸರ್ಕಾರ ಪ್ರತಿ ಎಕೆರೆಗೆ ೫ ಲಕ್ಷ ಪರಿಹಾರ ನೀಡುವ ಜೊತೆಗೆ ನಕಲಿ ಔಷಧಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವ ದಂದೆಕೋರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಸ್ಥಗಿತಗೊಳಿಸಿರುವ ಕಿಸಾನ್ ಸನ್ಮಾನ್ ಯೋಜನೆಯ ೪ ಸಾವಿರ ರೂಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೃಷಿ ಮಂತ್ರಿಗಳನ್ನು ಒತ್ತಾಯಿಸಿ ಆ-೯ ರ ಬುಧವಾರ ರಾಜ್ಯ ಹೆದ್ದಾರಿ ವಡ್ಡಹಳ್ಳಿ ವೃತ್ತ ನಷ್ಟ ಬೆಳೆ ಸಮೇತ ಬಂದ್ ಮಾಡಿ ಕೃಷಿ ಕ್ಷೇತ್ರ ಉಳಿವಿಗಾಗಿ ಸರ್ಕಾರವನ್ನು ಒತ್ತಾಯ ಮಾಡುವ ನಿರ್ಣಯವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಅ.ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ವಿಜಯ್‌ಪಾಲ್, ಸುನಿಲ್ ಕುಮಾರ್, ದೇವರಾಜ್, ಜುಬೇರ್‌ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಅಂಬ್ಲಿಕಲ್ ಮಂಜುನಾಥ, ನಲ್ಲಂಡಹಳ್ಳಿ ಕೇಶವ, ಶಿವನಾರಹಳ್ಳಿ ವೇಣು, ಸುಪ್ರಿಂ ಚಲ, ಯಾರಂಘಟ್ಟ ಗಿರೀಶ್ ಮುಂತಾದವರು ಇದ್ದರು.