ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್

ಬೆಂಗಳೂರು,ಆ.೧- ಹೋಟೆಲ್‌ವೊಂದರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ೮ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ರಿಚ್ ಮಂಡ್ ರಸ್ತೆ ಬಳಿಯ ಹೋಟೆಲ್‌ವೊಂದರಲ್ಲಿಗಲಾಟೆ ನಡೆದಿತ್ತು. ರಿಕ್ಕಿ ರೈ ಹಾಗೂ ಸಹಚರರಿಂದ ಅವಾಚ್ಯ ಶಬ್ಧದಿಂದ ನಿಂದಿಸಿ ಶ್ರೀನಿವಾಸ್ ನಾಯ್ಡು ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.
ಜೊತೆಗೆ ನಂತರ ರಿಕ್ಕಿ ರೈ ಆಪ್ತ ವಕೀಲ ನಾರಾಯಣ ಸ್ವಾಮಿಯಿಂದ ಶ್ರೀನಿವಾಸ್ ನಾಯ್ಡು ಅವರಿಗೆ ಪೊಲೀಸ್ ಠಾಣೆಗೆ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಶ್ರೀನಿವಾಸ್ ನಾಯ್ಡು ವಿರುದ್ಧವೇ ಕಳೆದ ಮೇ ೨೬ ೨೦೨೩ ರಂದು ಪ್ರಕರಣ ದಾಖಲಾಗಿತ್ತು.
ರಿಕ್ಕಿ ರೈ ಮೇಲೆ ಶ್ರೀನಿವಾಸ್ ನಾಯ್ಡು ಹಲ್ಲೆ ಮಾಡಿದ್ದಾಗಿ ಕಾರು ಚಾಲಕ ಸೋಮಶೇಖರ್ ಎಂಬಾತನಿಂದ ಶ್ರೀನಿವಾಸ್ ನಾಯ್ಡು ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಕೋರ್ಟ್ ಪಿಸಿಆರ್ ಅನ್ವಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೌಂಟರ್ ಎಫ್‌ಐಆರ್ ದಾಖಲಾಗಿದೆ.
ಕಳೆದ ೨೦೨೧ ಅಕ್ಟೋಬರ್‌ನಲ್ಲಿ ಸದಾಶಿವ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರಿಗೆ ಸೇರಿದ್ದ ೩ ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈಗೆ ಹಾಗೂ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಲಾಗಿತ್ತು.
ಹಣಕಾಸು ವ್ಯವಹಾರದ ವೈಶ್ಯಮದ ಹಿನ್ನೆಲೆ, ರಿಕ್ಕಿ ರೈ ಅಣತಿಯಂತೆ ದುಷ್ಕರ್ಮಿಗಳು ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ್ದರು. ಈ ಕುರಿತು ಸದಾಶಿವನಗರ ಠಾಣೆ ಪೊಲೀಸರು ರಿಕ್ಕಿ ರೈ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು