
ಕಲಬುರಗಿ,ಆ.01:ಹಿಂದುಳಿದ ಭಾಗದದಲ್ಲಿ ದಿ. ಮಹಾದೇವಪ್ಪ ರಾಂಪೂರೆ ಅವರು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ವಿಜಯಕುಮಾರ್ ಪರೂತೆ ಅವರು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಿಂ. ಮಹಾದೇವಪ್ಪ ರಾಂಪೂರೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಹಾದೇವಪ್ಪ ರಾಂಪೂರೆ ಅವರ ಜನ್ಮ, ಬಾಲ್ಯ ಮತ್ತು ಹೋರಾಟದ ಜೀವನÀ ಕುರಿತು ವಿವರಿಸಿದರು.
ಮಹಾರಾಷ್ಟ್ರದ ಸೋಲಾಪೂರಿನ ಕುಂಬಾರಿಯಲ್ಲಿ ಜನಿಸಿ, ಕಾರ್ಯ ಕ್ಷೇತ್ರವನ್ನಾಗಿ ಕಲಬುರ್ಗಿಯನ್ನು ಆಯ್ಕೆ ಮಾಡಿಕೊಂಡು, ಹಿಂದುಳಿದ ಭಾಗ ಎಂದೇ ಹೆಸರನ್ನು ಪಡೆದ ಈ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನೆ ಹುಟ್ಟಿಹಾಕಿದ ನಾಯಕನೆಂದು ಹೈದ್ರಾಬಾದ್ ಕರ್ನಾಟಕ ಭಾಗದ ಮದನಮೋಹನ್ ಮಾಳವಿಯಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಡಾ. ರಾಜೇಂದ್ರ ಕೊಂಡಾ ಅವರು ಮಾತನಾಡಿ, ಲಿಂ. ಮಹಾದೇವಪ್ಪ ರಾಂಪೂರೆ ಅವರು ಈ ಭಾಗದಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕದೇ ಇದ್ದರೆ ಎಷ್ಟೋ ಬಡ ಜನರಿಗೆ ವಿದ್ಯೆ ದೊರಕುವುದು ಕಷ್ಟವಾಗುತ್ತಿತು ಎಂದರು.
ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ ಉಮಾ ರೇವೂರ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಲಾ ಪಾಟೀಲ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ. ನಾಗೇಂದ್ರ ಮಸೂತಿಯವರು ಉಪಸ್ಥಿತರಿದ್ದರು.
ಕಾಲೇಜಿನ ಸಂಗೀತ ವಿಭಾಗ ಮುಖ್ಯಸ್ಥೆ ಡಾ. ರೇಣುಕಾ ಹಾಗರಗುಂಡಗಿ ಹಾಗೂ ಡಾ. ಮುಕಿಮೀಯಾ ಅವರು ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನಾ ಗೀತೆ ಹಾಡಿದರು. ಡಾ. ನಾಗೇಂದ್ರ ಮಸೂತಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪ್ರೇಮಚಂದ್ ಚವ್ಹಾಣ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಡಾ. ಮೋಹನರಾಜ್ ಪತ್ತಾರ್ ಅವರು ವಂದಿಸಿದರು. ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಅಂಜಲಿ ಯಾದವ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.